

ಬೆಳಗಾವಿ: ತಾಲೂಕಿನ ಕೆ.ಕೆ.ಕೊಪ್ಪ, ಸೋಮನಗರ ಹಾಗೂ ಬಸ್ತವಾಡದಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ದಿಢೀರ್ ಭೇಟಿ ನೀಡಿದ ಬೆಳಗಾವಿ ಸಿಟಿಇ ಸಹನಿರ್ದೇಶಕ ರಾಜೀವ ನಾಯಿಕ ವಿದ್ಯಾರ್ಥಿಗಳ ಸುರಕ್ಷತೆ, ದಾಖಲಾತಿ ಹಾಗೂ ಹಾಜರಾತಿಗೆ ವಿಶೇಷ ಕಾಳಜಿವಹಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವಂತೆ ಶಿಕ್ಷಕರಿಗೆ ಸೂಚನೆ ನೀಡಿದರು.
ಉನ್ನತೀಕರಿಸಿದ ಬಸ್ತವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಬೆಳಗ್ಗೆ ಭೇಟಿ ನೀಡಿದ ಅವರು, ಹಾಜರಾತಿ ಪರಿಶೀಲಿಸಿ 185 ವಿದ್ಯಾರ್ಥಿಗಳು ಗೈರಾಗಿರುವುದನ್ನು ಕಂಡು ಕೂಡಲೇ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಕ್ರಿಯಾಶೀಲರಾಗಬೇಕು. ಹಾಗೂ ಹೊಸ ದಾಖಲಾತಿಗಳಿಗೆ ಶಾಲೆ ವ್ಯಾಪ್ತಿಯಲ್ಲಿ ದಾಖಲಾತಿ ಆಂದೋಲನ ನಡೆಸುವುದು ಹಾಗೂ ಮಳೆ ಬಿಲ್ಲು ಕಾರ್ಯಕ್ರಮ ಚಟುವಟಿಕೆಗಳ ಅನುಷ್ಠಾನಗೊಳಿಸುವಂತೆ ಹೇಳಿದರು. ಇನ್ನು ಸೋಮನಗರದ (ಕೆ.ಕೆ.ಕೊಪ್ಪ) ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾಗಿರುವ 27 ಮಕ್ಕಳ ಪೈಕಿ ಗೈರಾಗಿದ್ದ 8 ಜನರನ್ನು ಕರೆತರುವುದು ಹಾಗೂ ಶಾಲೆ ಆವರಣ ಇಳಿಜಾರು ಇರುವುದರಿಂದ ಆಟದ ಅವಧಿಯಲ್ಲಿ ಹೆಚ್ಚಿನ ನಿಗಾವಹಿಸುವಂತೆ ತಿಳಿಸಿದರು. ಅಲ್ಲದೇ, ಶಾಲೆಯಲ್ಲಿ ಶೈಕ್ಷಣಿಕ ವಾತಾವರಣ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕರಾದ ವಿ. ಎಂ.ಮುಳ್ಳೂರ. ಸಹ ಶಿಕ್ಷಕಿ ಎಂ.ಎಸ್.ಡಮ್ಮಣಗಿ ಇತರರು ಇದ್ದರು.