

ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಸುಧಾರಿಸುವ ಜತೆಗೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರು ಮುಖ್ಯಶಿಕ್ಷಕರಿಗೆ ನಿರ್ದೇಶನ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಜಿಲ್ಲೆಯಲ್ಲಿ ಸುಧಾರಣೆ ಆಗಲೇಬೇಕು. ಅದಕ್ಕಾಗಿ ಶಾಲೆಗಳಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಲು ವಿಶೇಷ ತರಗತಿ, ಗುಂಪು ಅಧ್ಯಯನ (ಗ್ರೂಪ್ ಸ್ಟಡೀಸ್) ಸೇರಿದಂತೆ ಇನ್ನಿತರ ಚಟುವಟಿಕೆ ನಡೆಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿರುವ 233 ಸರ್ಕಾರಿ ಶಾಲೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಬುಡಕಟ್ಟು ಇಲಾಖೆಯಿಂದ ನಡೆಯುತ್ತಿರುವ 48 ಶಾಲೆಗಳಲ್ಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂದರು.
ವಿಷಯವಾರು ತಜ್ಞರಿಂದ ಮಕ್ಕಳಿಗೆ ಸುಲಭವಾಗಿ ಕಲಿಕಾ ಸಾಮರ್ಥ್ಯ ವೃದ್ಧಿಸುವ ಹಾಗೂ ತರಗತಿಯಲ್ಲಿ ಕಲಿತದ್ದನ್ನು ಮನನ ಮಾಡುವ ವಿಧಾನವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೇ.75ಕ್ಕಿಂತ ಹೆಚ್ಚು ಫಲಿತಾಂಶ ಬರಬೇಕು. ಶಿಕ್ಷಕರ ಕೊರತೆ ಇದ್ದರೆ, ಅದನ್ನು ಸರಿದೂಗಿಸಲು ಕ್ರಮ ಕೈಗೊಳ್ಳಬೇಕು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಮುಂದಿನ ವಾರದಲ್ಲಿ ಕಳೆದ ವರ್ಷ ಶೇ.70ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲಾ ಮುಖ್ಯ ಶಿಕ್ಷಕರ ಸಭೆ ಕರೆಯಲಾಗುವುದು. ಅಷ್ಟರೊಳಗೆ ಎಲ್ಲ ಶಾಲೆಗಳಲ್ಲೂ ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷೆ ಸಮೀಪಿಸುತ್ತಿರುವುದರಿಂದ 8 ವಾರಗಳ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಅದಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ಸಲಹೆ ನೀಡಿದರು.
ಡಿಡಿಪಿಐ ಜವರೇಗೌಡ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ 276 ಸರ್ಕಾರಿ ಶಾಲೆಗಳು ಸೇರಿದಂತೆ 688 ಪ್ರೌಢಶಾಲೆಗಳಲ್ಲಿ ಈ ಬಾರಿ 39,132 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ನೊಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ವಿಶೇಷ ತರಗತಿ ಆಯೋಜಿಸುವುದು, ವಿಷಯವಾರು ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ವಿಷಯ ತಜ್ಞರಿಂದ ತರಗತಿ ನಡೆಸುವಂತೆ ಸೂಚನೆ ನೀಡಲಾಗಿದ್ದು, ಈಗಾಗಲೇ ಎಲ್ಲ ಶಾಲೆಗಳಲ್ಲೂ ವಿಶೇಷ ತರಗತಿಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಡಯಟ್ ಪ್ರಾಂಶುಪಾಲ ನಾಗರಾಜಯ್ಯ, ಜಿಲ್ಲೆಯ ವಿವಿಧ ವಲಯ ಹಾಗೂ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರು.