

ಚಿತ್ರದುರ್ಗ: ಹೊರವಲಯದ ಸೀಬಾರ-ಗುತ್ತಿನಾಡು ಸಮೀಪದ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಬುಧವಾರ ಹಳೆಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ನಡೆಯಿತು.
ಸಂಸ್ಥೆ ಆರಂಭದಿಂದ ಈವರೆಗೂ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಭ್ರಮದಲ್ಲಿ ಪಾಲ್ಗೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
2000-01ನೇ ಸಾಲಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, 2012-13ನೇ ಸಾಲಿನಿಂದ ಪಿಯುಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ಅದರಲ್ಲಿ ಉನ್ನತ ಸ್ಥಾನಕ್ಕೇರಿದವರನ್ನು ಸನ್ಮಾನಿಸಲಾಯಿತು.
ವಸತಿ ಶಾಲೆ ಮುಖ್ಯಶಿಕ್ಷಕ ಬಿ.ಜಿ.ಶಿವರುದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ನೀಲಕಂಠದೇವರು, ರೂವಾರಿ ಎಚ್.ಜಲೀಲ್ ಸಾಬ್, ಮುಖ್ಯಶಿಕ್ಷಕ ಜಿ.ಆರ್.ಚನ್ನಬಸಪ್ಪ, ಪ್ರಾಚಾರ್ಯೆ ಸುಧಾ, ಶಿಕ್ಷಕರಾದ ಎ.ಆರ್.ರಂಗಪ್ಪ, ಎಸ್.ಎಂ.ಬಿ.ಸ್ವಾಮಿ ಇತರರಿದ್ದರು.