ವಿದ್ಯಾರ್ಥಿಗಳ ಮನೆಗೇ ಬಿಸಿಯೂಟದ ಪಡಿತರ; 108 ದಿನಗಳ ಲೆಕ್ಕದಲ್ಲಿ ಪೂರೈಕೆಗೆ ಸರ್ಕಾರ ಆದೇಶ

midday meal
Published on

ಚಿಕ್ಕಬಳ್ಳಾಪುರ: ಕರೊನಾದಿಂದಾಗಿ ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮನೆಗೇ ಬಿಸಿಯೂಟದ ಪಡಿತರ ತಲುಪಿಸಲು ಅಕ್ಷರ ದಾಸೋಹ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

ಮಹಾಮಾರಿಯ ಆತಂಕದಿಂದಾಗಿ ಮಾರ್ಚ್‌ನಿಂದ ಬಾಗಿಲು ಮುಚ್ಚಿರುವ ಶಾಲೆಗಳು ಸದ್ಯಕ್ಕೆ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ, ಮಧ್ಯಾಹ್ನದ ಬಿಸಿಯೂಟವೂ ಸ್ಥಗಿತಗೊಂಡಿದೆ, ಇದರ ನಡುವೆ ಯೋಜನೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗ ಸೂಚಿಸಿರುವ ಸರ್ಕಾರ, 108 ದಿನಗಳ ಲೆಕ್ಕದಲ್ಲಿ ಮಕ್ಕಳ ಮನೆಗೆ ಆಹಾರ ಪದಾರ್ಥ ಪೂರೈಕೆ ಮಾಡಲು ಆದೇಶಿಸಿದೆ.

ಮೊದಲ ಹಂತದಲ್ಲಿ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 53 ದಿನಗಳು, 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 45 ದಿನ, 9 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 53 ದಿನಗಳ ಲೆಕ್ಕದಲ್ಲಿ ಪಡಿತರ ವಿತರಿಸಲು ಮುಂದಾಗಿದ್ದು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅಕ್ಷರದಾಸೋಹ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 1ರಿಂದ 10ನೇ ತರಗತಿವರೆಗೂ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ ಶಾಲೆಯ 89,916 ವಿದ್ಯಾರ್ಥಿಗಳು ಯೋಜನೆಯ ಲಾಭ ಪಡೆಯುತ್ತಿದ್ದು, ಆಯಾ ಶಾಲಾ ಶಿಕ್ಷಕರ ಮೂಲಕ ನಿಗದಿತ ದಿನದಂದು ಪಡಿತರ ವಿತರಿಸಲಾಗುತ್ತದೆ. ಒಂದೆರಡು ದಿನದಲ್ಲಿ ಶಾಲೆಗಳಿಗೆ ಆಹಾರ ಪದಾರ್ಥಗಳು ಪೂರೈಕೆಯಾಗಲಿದ್ದು, ಡಿಸೆಂಬರ್‌ವರೆಗಿನ ಲೆಕ್ಕದಲ್ಲಿ ಪಡಿತರವನ್ನು ಮನೆಗೆ ತಲುಪಿಸಲಾಗುತ್ತದೆ.

ಪಡಿತರ ವಿತರಣೆ ಪ್ರಮಾಣ: ಪ್ರಸ್ತುತ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 263.41 ರೂ. ವೆಚ್ಚವಾಗಲಿದ್ದು 4.500 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ.ಗೋಧಿ ವಿತರಿಸಲಾಗುತ್ತದೆ. 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 394.85 ರೂ,ವೆಚ್ಚವಾಗಲಿದ್ದು 6.750 ಕೆ.ಜಿ ಅಕ್ಕಿ, 1.200 ಕೆ.ಜಿ.ಗೋಧಿ, ಬೇಳೆ 4.610 ಕೆ.ಜಿ ನೀಡಲಾಗುತ್ತದೆ. 9ರಿಂದ 10ನೇ ತರಗತಿ ಮಕ್ಕಳಿಗೆ ತಲಾ 394.85 ರೂ.ವೆಚ್ಚವಾಗಲಿದ್ದು 7.950 ಕೆ.ಜಿ ಅಕ್ಕಿ ಮತ್ತು 4.611 ಕೆ.ಜಿ.ಬೇಳೆ ವಿತರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಸಿಯೂಟ ಯೋಜನೆಯ ಲಾನುಭವಿ ವಿದ್ಯಾರ್ಥಿಗಳಿಗೆ ನೀಡುವ ಪಡಿತರ ಈಗಾಗಲೇ ಜಿಲ್ಲೆಗೆ ಪೂರೈಕೆಯಾಗಿದೆ. ಸಮರ್ಪಕವಾಗಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶೈಲಾ, ಅಕ್ಷರದಾಸೋಹ ಶಿಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net