

ಹಾಸನ : ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ಭದ್ರ ಅಡಿಪಾಯ ಹಾಕುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಕಾರಣೀಭೂತರಾಗಿದ್ದಾರೆ ಎಂದು ಶಾಸಕ ಪ್ರೀತಂ ಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರುವಿಲ್ಲದೆ ಗುರಿ ಮುಟ್ಟಲು ಅಸಾಧ್ಯ. ಪ್ರತಿಯೊಬ್ಬ ಸಾಧಕನ ಹಿಂದೆಯೂ ಇರುವ ಗುರುವಿನ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದರು.
ನಿವೃತ್ತಿಯ ಒಳಗಾಗಿ ಸೂರು ಕಟ್ಟುವ ಕನಸು ಹೊಂದಿರುವ ಜಿಲ್ಲೆಯ ಶಿಕ್ಷಕರಿಗೆ ಶೀಘ್ರ ಶಿಕ್ಷಕರ ಬಡಾವಣೆ ನಿರ್ಮಾಣ ಮಾಡಿ ಅವರಿಗೆ ನಿವೇಶನ ಒದಗಿಸುವ ಕೆಲಸ ಮಾಡಲಾಗುವುದು ಎಂದು ಶಾಸಕರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾತನಾಡಿ, ದೇಶದ ಸರ್ವತೋಮುಖ ಏಳಿಗೆಗೆ ಶಿಕ್ಷಕರ ಕೊಡುಗೆ ಅಪಾರ, ಹಾಗಾಗಿ ಗುರು ಹಿರಿಯರ ಮಾರ್ಗದಲ್ಲಿ ನಡೆಯುವುದರ ಮೂಲಕ ಸದೃಢ ರಾಷ್ಟ್ರ ನಿರ್ಮಿಸೋಣ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್‌ಮಾತನಾಡಿ, ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ದೇಶ ಅಭವೃದ್ಧಿಯತ್ತ ಸಾಗುತ್ತದೆ ಹಾಗೂ ಶಿಕ್ಷಕರಿಂದ ಮಾತ್ರ ದೇಶದ ಏಳಿಗೆ ಸಾಧ್ಯ. ಎಲ್ಲರೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಅವರ ಜನ್ಮ ದಿನಾಚರಣೆಗೆ ಅರ್ಥ ದೊರೆಯುತ್ತದೆ ಎಂದು ತಿಳಿಸಿದರು.
ಸಾಹಿತಿ ಸುಶೀಲಾ ಸೋಮಶೇಖರ್ ಪ್ರಧಾನ ಭಾಷಣ ಮಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ ಚರಿತ್ರೆಯ ಬಗ್ಗೆ ತಿಳಿಸಿಕೊಟ್ಟರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ .ಎಸ್ ಪ್ರಕಾಶ್ ಸ್ವಾಗತಿಸಿದರು. ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ’ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕಿ ಎಚ್.ಕೆ. ಪುಷ್ಪಲತಾ, ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಮ್, ಚಂದ್ರಪ್ಪ, ಬಸವರಾಜ್, ರಾಜಶೇಖರಪ್ಪ, ಚಕ್ರಪಾಣಿ ಇತರರು ಇದ್ದರು.