ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ನಮ್ಮೂರ ಹೆಮ್ಮೆ

nrp sanmana
ಎನ್.ಆರ್.ಪುರ ತಾಲೂಕು ಮೂಡಬಾಗಿಲಿನಲ್ಲಿ ನಡೆದ ನಮ್ಮೂರ ಹೆಮ್ಮೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪಿ.ಎಂ.ಸಿಂಚನಾ ಅವರನ್ನು ಪುರಸ್ಕರಿಸಲಾಯಿತು. ಶ್ರೀಜಿತ್, ರತನ್ ಗೌಡ, ಕೆ.ವಿ.ಸಾಜು, ಮಂಜಪ್ಪ ಗೌಡ, ಮಹಮ್ಮದ್‌ತಯೀಬ್, ಉಮೇಶ್ ಇತರರಿದ್ದರು.
Published on

ಎನ್.ಆರ್.ಪುರ: ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಘಟಕದಿಂದ ನಮ್ಮೂರ ಹೆಮ್ಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಜಿತ್ ಹೇಳಿದರು.

ಮೂಡಬಾಗಿಲು ಗ್ರಾಮದಲ್ಲಿ ತಾಲೂಕು ಯುವ ಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡಿದ್ದ ನಮ್ಮೂರ ಹೆಮ್ಮೆ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 619 ಅಂಕ ಪಡೆದ ಗ್ರಾಮದ ಪಿ.ಎಂ.ಸಿಂಚನಾ ಅವರನ್ನು ಪುರಸ್ಕರಿಸಿ ಮಾತನಾಡಿದರು. ಕರೊನಾ ಸಂದರ್ಭದಲ್ಲಿ ಶಾಲೆಗೆ ಹೋಗಲು ಸಾಧ್ಯವಾಗದೆ ಧೈರ್ಯದಿಂದ ಪರೀಕ್ಷೆ ಬರೆದು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವರ ಮನೆಗೆ ಹೋಗಿ ಪುರಸ್ಕರಿಸಲು ಕೆಪಿಸಿಸಿ ವಕ್ತಾರ ಸುಧೀರ್‌ಕುಮಾರ್ ಮುರೊಳ್ಳಿ ಸಲಹೆಯಂತೆ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು. ಪ್ರಸ್ತುತ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ 12 ವಿದ್ಯಾರ್ಥಿಗಳನ್ನು ಅವರ ಮನೆಗೆ ಹೋಗಿ ಪುರಸ್ಕರಿಸಲಾಗುವುದು. ಸಿಂಚನಾ ಅತಿ ಹೆಚ್ಚು ಅಂಕ ಪಡೆದಿರುವುದು ತಾಲೂಕಿಗೆ ಹೆಮ್ಮೆಯಾಗಿದ್ದು, ಯುವ ಕಾಂಗ್ರೆಸ್ ಘಟಕದಿಂದ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಕಲ ರೀತಿ ನೆರವು ನೀಡಲಾಗುವುದು ಎಂದರು.

ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರತನ್‌ಗೌಡ ಅರಗಿ ಮಾತನಾಡಿ, ತಾಲೂಕಿಗೆ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪಿ.ಎಂ.ಸಿಂಚನಾ ಅವರ ವಿದ್ಯಾಭ್ಯಾಸಕ್ಕೆ ಸಹಾಯಹಸ್ತ ಚಾಚಲಾಗುವುದು ಎಂದರು.

ತಾಲೂಕು ಕಾಂಗ್ರೆಸ್ ಹೋಬಳಿ ಘಟಕದ ಅಧ್ಯಕ್ಷ ಕೆ.ವಿ.ಸಾಜು ಮಾತನಾಡಿ, ಗ್ರಾಮೀಣ ಪ್ರದೇಶದ ಆಟೋ ಚಾಲಕನ ಮಗಳು ಸಾಧನೆ ಮಾಡಿರುವುದು ಊರಿಗೆ ಹೆಮ್ಮೆಯ ವಿಷಯ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳಲ್ಲಿ ನೇಮಕವಾಗುವಂತಾಗಬೇಕು ಎಂದರು.

ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಸಕಲ ಸೌಲಭ್ಯಗಳಿದ್ದು ಸಾಧನೆ ಮಾಡದ ವಿದ್ಯಾರ್ಥಿಗಳ ನಡುವೆ ಸಿಂಚನಾ ಅವರ ಸಾಧನೆ ಮಾದರಿಯಾಗಿದೆ ಎಂದರು.

ಪಿ.ಎಂ.ಸಿಂಚನಾ ಮಾತನಾಡಿ, ಪಾಲಕರ ಸಹಕಾರದಿಂದ ಹೆಚ್ಚು ಅಂಕಗಳಿಸಲು ಸಾಧ್ಯವಾಯಿತು. ವೈದ್ಯಳಾಗುವ ಗುರಿ ಹೊಂದಿದ್ದೇನೆ ಎಂದರು.

ಯುವ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ತಯೀಬ್, ರಾಶ್ವಿಕ್, ಉಮೇಶ್, ಸಂದೀಪ್, ಮಂಜು, ಪ್ರಜ್ವಲ್, ನೀಶ್, ಬಿನು, ಬಸವರಾಜ್, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಮಂಜಪ್ಪ ಗೌಡ, ವಿದ್ಯಾರ್ಥಿನಿಯ ಪಾಲಕರಾದ ಎಲ್ದೋ, ಧನು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net