

ಚಾಮರಾಜನಗರ: ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಜಿಲ್ಲಾಡಳಿತ, ಜಿಲ್ಲಾ ಪಂಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಬಿಸಿಯೂಟ, ಹಾಲು, ಮೊಟ್ಟೆ ವಿತರಣೆ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುವಂತೆ ನೋಡಿಕೊಳ್ಳಲಾಗುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವೇ ಪ್ರತಿಭಾ ಕಾರಂಜಿಯನ್ನು ಆಯೋಜಿಸಿತು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ತನ್ನದೇಯಾದ ಪ್ರತಿಭೆ ಅಡಕವಾಗಿರುತ್ತದೆ. ಜಾನಪದ ನೃತ್ಯ, ಹಾಡುಗಾರಿಕೆ, ಚಿತ್ರಕಲೆ ಹಾಗೂ ಇನ್ನಿತರೆ ಪ್ರತಿಭೆಯನ್ನು ಹೊಂದಿರುತ್ತಾರೆ. ಆ ಪ್ರತಿಭೆಯನ್ನು ಹೊರತೆಗೆಯಲು ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಎಂ.ಮಹೇಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಹನುಮಶೆಟ್ಟಿ, ಗುರುಲಿಂಗಯ್ಯ, ಮಂಜುಳಾ, ಅನ್ನಪೂರ್ಣ ಹಾಗೂ ಇತರರು ಹಾಜರಿದ್ದರು.
ಸ್ಪರ್ಧಿ ಆಯ್ಕೆಯಲ್ಲಿ ಗೊಂದಲ:
ಪ್ರತಿಭಾ ಕಾರಂಜಿಯ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಹನೂರು ತಾಲೂಕಿನಿಂದ ಪ್ರಥಮ ಸ್ಥಾನ ಪಡೆದುಕೊಂಡಿದ್ದ ವಿದ್ಯಾರ್ಥಿಯನ್ನು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪರಿಗಣಿಸಿಲ್ಲ ಎಂದು ಪಾಲಕರು ಆಯೋಜಕರ ವಿರುದ್ಧ ಬೇಸರ ಹೊರಹಾಕಿದರು. ವಿದ್ಯಾರ್ಥಿನಿ ಹನ್ಸಿಕ ಎಂಬುವವರು ತಾಲೂಕು ಮಟ್ಟದ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಪಡೆದುಕೊಂಡಿದ್ದರು. ಆದರೇ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗೆ ಅವಕಾಶ ನೀಡುತ್ತಿಲ್ಲ. ಈ ಸಂಬಂಧ ಪ್ರಶ್ನೆ ಮಾಡಿದರೇ, ಕಾಟಾಚಾರಕ್ಕೆ ಬೇರೊಂದು ಸ್ಪರ್ಧೆಯಲ್ಲಿ ಭಾಗವಹಿಸಿ ಕಳುಹಿಸಿದ್ದಾರೆ ಎಂದು ವಿದ್ಯಾರ್ಥಿನಿ ಪಾಲಕರಾದ ನಾಗರಾಜು ಎಂಬುವವರು ವಿಜಯವಾಣಿ ಜತೆಗೆ ಮಾತನಾಡಿ, ಬೇಸರ ವ್ಯಕ್ತಪಡಿಸಿದರು. ಕಠಪಾಠ, ದೇಶಭಕ್ತಿಗೀತೆ, ಪ್ರಬಂಧ ರಚನೆ, ಕಥೆ ಹೇಳುವುದು, ಅಭಿನಯ ಗೀತೆ, ಚಿತ್ರಕಲೆ, ಮಣ್ಣಿನ ಮಾದರಿ, ಭಕ್ತಿ ಗೀತೆ, ಆಶು ಭಾಷಣ, ಕವನ ವಾಚನ, ಮಿಮಿಕ್ರಿ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.