

ಚಾಮರಾಜನಗರ: ಅನ್ನ, ಅಕ್ಷರ ದಾಸೋಹದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ಶ್ರೀಶಿವರಾತ್ರಿ ರಾಜೇಂದ್ರ ಶ್ರೀಗಳು ದಾರಿದೀಪವಾಗಿದ್ದರು ಎಂದು ಚುಂಚನಹಳ್ಳಿ ಕಡಲಕಟ್ಟೆ ಮಠದ ಪೀಠಾಧ್ಯಕ್ಷ ಶ್ರೀಚನ್ನಬಸವಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ಕುದೇರು ಶಂಕರಮಠ ಆವರಣದಲ್ಲಿ ವೀರಶೈವ ಯುವ ವೇದಿಕೆ, ವೀರಶೈವ ಭಕ್ತ ಮಂಡಳಿ, ಜೆಎಸ್‌ಎಸ್ ನೌಕರರ ವೃಂದ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀಶವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ತಮ್ಮ ಚಿನ್ನದ ಕರಡಗೆಯನ್ನೇ ಮಾರಾಟ ಮಾಡಿ, ಬಡ ಮಕ್ಕಳಿಗೆ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿಧ್ಯಾ ದಾನ ಮಾಡಿ ಅವರಿಗೆ ದಾರಿದೀಪವಾದರು. ಅವರ ಅಮಾಜಮುಖಿ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಸಾಗಬೇಕು ಎಂದು ತಿಳಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಗ್ರಾಮಾಂತರ ಪ್ರದೇಶದಿಂದ ಮೈಸೂರಿಗೆ ಬಂದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಿದರು. ತಿ.ನರಸೀಪುರ, ಚಾಮರಾಜನಗರ, ನಂಜನಗೂಡಿನಲ್ಲಿ ಬಾಡಿಗೆ ಮನೆಗಳನ್ನು ಪಡೆದು ಪ್ರಸಾದ ನಿಲಯವನ್ನು ಆರಂಭಿಸಿದರು. ಸಂಸ್ಥೆಗಳು ಹಾಗೂ ವಿದ್ಯಾರ್ಥಿ ನಿಲಯಗಳನ್ನು ನಡೆಸಲು ಒಂದೊತ್ತಿನ ಪ್ರಸಾದವನ್ನಷ್ಟೇ ಸ್ವೀಕರಿಸುತ್ತಿದ್ದರು. ಅವರ ಮಾತೃವಾತ್ಸಲ್ಯ ನಮ್ಮಲ್ಲರಿಗೂ ಆದರ್ಶವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕುದೇರು ಶಂಕರ ಮಠದ ಅಧ್ಯಕ್ಷ ನಟರಾಜಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ವಿಭಾಗದ ನಿರ್ದೇಶಕ ಕೆ.ಎಲ್.ರೇವಣ್ಣಸ್ವಾಮಿ, ಪಡುವಲ ಮಠದ ಪ್ರಭು ಸ್ವಾಮೀಜಿ, ಜೆಎಸ್‌ಎಸ್ ಸಂಸ್ಥೆಯ ತಾಂತ್ರಿಕ ವಿದ್ಯಾಲಯದ ಮಂಜುನಾಥ್, ಕೆ.ಆರ್.ಕುಮಾರಸ್ವಾಮಿ, ನಿವೃತ್ತ ಶಿಕ್ಷಕರಾದ ವೀರಭದ್ರಪ್ಪ, ಮುಖಂಡರಾದ ಸುಭೋಜ, ಮಲ್ಲಿಕಾರ್ಜುನಸ್ವಾಮಿ ಹಾಗೂ ಗ್ರಾಮಸ್ಥರು ಹಾಜರಿದ್ದರು.