ವಿದ್ಯಾರ್ಥಿಗಳ ಜೀವನದಲ್ಲಿ ಸಮಯ ಬಹುಮುಖ್ಯ

Published on

ಹೊಸಪೇಟೆ: ವಿದ್ಯಾರ್ಥಿಗಳ ಜೀವನದಲ್ಲಿ ಹಾಸ್ಟೆಲ್ ಜೀವನವು ಮರೆಯಲಾಗದ ಅನುಭವ ನೀಡುತ್ತದೆ ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.

ಕನ್ನಡ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಕೂಡಿ ಬಾಳುವುದು ಹೇಗೆ ಎಂಬುದನ್ನು ಹಾಸ್ಟೆಲ್ ಜೀವನ ಕಲಿಸಿ ಕೊಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಹಾಸ್ಟೆಲ್‌ಗಳು ಸಹಕಾರಿಯಾಗಿವೆ. ಉತ್ತಮ ಜೀವನ ರೂಪಿಸಿಕೊಳ್ಳಬೇಕು ಸಮಯವನ್ನು ಎಂದಿಗೂ ವ್ಯರ್ಥ ಮಾಡಬೇಡಿ, ಸಮಯವೇ ನಿಮಗೆ ಶ್ರೀರಕ್ಷೆ ಎಂದರು.

ಕೇವಲ ಹಾಸ್ಟೆಲ್ ಜೀವನವೇ ಒಂದು ಜೀವನವಲ್ಲ. ಅದರ ಆಚೆಗೂ ಕೂಡ ಒಂದು ಸುಂದರ ಬದುಕಿದೆ ಎಂದು ವಿದ್ಯಾರ್ಥಿಗಳು ಅರಿತುಕೊಂಡಿರಬೇಕು. ಓದು ಎಂದರೆ ಕೇವಲ ಪುಸ್ತಕ ಅಲ್ಲ, ಪ್ರಪಂಚ ಜ್ಞಾನ ಪಡೆದುಕೊಂಡಾಗ ಮಾತ್ರ ನಿಜವಾದ ನಾಗರಿಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆಯಿAದ ಸಮಾಜವನ್ನು ಗೆಲ್ಲಬಹುದು. ಹಾಸ್ಟೆಲ್‌ನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ನಿಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೈ.ಎ.ಕಾಳೆ ಮಾತನಾಡಿ, ಆಧುನಿಕ ಜಗತ್ತು ಸ್ಪರ್ಧಾತ್ಮಕ ಯುಗವಾಗಿದೆ. ಬೇರೆ ಬೇರೆ ಪರೀಕ್ಷೆಗಳ ಮೂಲಕ ಉನ್ನತ ಹುದ್ದೆಗಳನ್ನು ಪಡೆದುಕೊಂಡು ಕನಸನ್ನು ನನಸು ಮಾಡಬೇಕು. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದ್ದೇವೆ. ಒಬ್ಬ ಗುರುವಿನ ನಿಜವಾದ ಗೆಲುವು ವಿದ್ಯಾರ್ಥಿಗಳ ಸಾಧನೆಯಲ್ಲಿ ಅಡಗಿದೆ ಎಂದರು.

ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್, ವಸತಿ ನಿಲಯದ ನಿಲಯಪಾಲಕರಾದ ಮಲ್ಲಿಕಾರ್ಜುನ, ಮಹಾಲಿಂಗಪ್ಪ, ಕೃಷ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net