ವಿದ್ಯಾರ್ಥಿಗಳ ಆರೋಗ್ಯ ಕಾಳಜಿಗೆ ಒತ್ತು ನೀಡಿ

29
Published on

ಹಾಸ್ಟೆಲ್​ಗಳಲ್ಲಿನ ಅವ್ಯವಸ್ಥೆ ಕಂಡು ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ಉಸ್ತುವಾರಿ ಕಾರ್ಯದರ್ಶಿ ಶೋಭಾ

ಕೊರಟಗೆರೆ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಪ.ಜಾತಿ, ಪಂಗಡದ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಕ್ಕೆ ಇಲಾಖೆಯ ಜಿಲ್ಲಾ ಉಸ್ತುವಾರಿ, ಕಾರ್ಯದರ್ಶಿ ಶೋಭಾ ಗುರುವಾರ ದಿಢೀರ್​ ಭೇಟಿ ನೀಡಿ, ಪರಿಶೀಲಿಸಿದ್ದು, ಹಾಸ್ಟೆಲ್​ ಅವ್ಯವಸ್ಥೆ ಕಂಡು ಸಿಬ್ಬಂದಿ ವಿರುದ್ಧ ಸಿಡಿಮಿಡಿಗೊಂಡರಲ್ಲದೇ, ಸಮರ್ಪಕ ರೀತಿಯಲ್ಲಿ ನಿರ್ವಹಿಸುವಂತೆ ಕಟ್ಟುನಿಟ್ಟಿನಿಂದ ಸೂಚಿಸಿದರು.

ಇವುಗಳಲ್ಲದೇ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ, ಮುರಾರ್ಜಿ ದೇಸಾಯಿ ವಸತಿ ಶಾಲೆ, ಏಕಲವ್ಯ ವಸತಿ ಶಾಲೆ, ಕೊರಟಗೆರೆ ಮೆಟ್ರಿಕ್​ ಪೂರ್ವ ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್​ಗಳಿಗೆ ಭೇಟಿ ನೀಡಿದ ಶೋಭಾ, ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ, ಆಹಾರ ವಿತರಣೆ, ಮೂಲ ಸೌಕರ್ಯ ಪರಿಶೀಲಿಸಿ, ಎಲ್ಲ ವಸತಿ ಶಾಲೆಗಳಲ್ಲೂ ಕಡ್ಡಾಯವಾಗಿ ದೂರು ಪೆಟ್ಟಿಗೆ ಅಳವಡಿಕೆ, ಗುಣಮಟ್ಟದ ಆಹಾರ ಪೂರೈಕೆ, ವಿದ್ಯಾರ್ಥಿಗಳ ಆರೋಗ್ಯ ಕಾಳಜಿಗೆ ಹೆಚ್ಚಿನ ಒತ್ತು ನೀಡುವಂತೆ ನಿರ್ದೇಶಿಸಿದರು. ಈ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಅನಂತರಾಜು, ಕಂದಾಯ ಇಲಾಖೆ ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಶ್ರುತಿ ಇದ್ದರು.

ಆಹಾರ ಪದಾರ್ಥಗಳಲ್ಲಿ ಹುಳುಗಳು?: ಕೊರಟಗೆರೆ ಪಟ್ಟಣದ ಸಂತೆ ಮೈದಾನ ಸಮೀಪದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್​ ನಂತರದ ವಿದ್ಯಾರ್ಥಿನಿಯರ ವಸತಿನಿಲಯಕ್ಕೆ ಇಲಾಖೆಯ ತಾಲೂಕು ಮೇಲುಸ್ತುವಾರಿ ಶೋಭಾ ಬೆಳಗ್ಗೆ 9ರ ಸುಮಾರಿಗೆ ಭೇಟಿ ನೀಡಿದಾಗ ನಿಲಯ ಪಾಲಕಿ ಜಯಮ್ಮ ಹಾಸ್ಟೆಲ್​ನಲ್ಲಿ ಇಲ್ಲದಿರುವ ಬಗ್ಗೆ ಸಿಡಿಮಿಡಿಗೊಂಡರು. ಹಾಸ್ಟೆಲ್​ನ ಆಹಾರ ಪದಾರ್ಥಗಳಾದ ಹಿಟ್ಟು ಮತ್ತು ಅಕ್ಕಿಯಲ್ಲಿ ಹುಳುಗಳು ಕಂಡುಬಂದಿದ್ದು, ತಡವಾಗಿ ಬಂದ ನಿಲಯ ಪಾಲಕಿ ಜಯಮ್ಮಅವರನ್ನು ತರಾಟೆ ತೆಗದುಕೊಂಡರು. ಪ್ರತಿದಿನ ಮಧುಗಿರಿಯಿಂದ ಪ್ರಯಾಣಿಸುತ್ತಿರುವುದಾಗಿ ಜಯಮ್ಮ ತಿಳಿಸಿದಾಗ ಸುಮ್ಮನಾದ ಶೋಭಾ, ಅಡುಗೆ ಪದಾರ್ಥಗಳಲ್ಲಿ ಹುಳುಗಳಾಗದಂತೆ ಸ್ವಚ್ಛಗೊಳಿಸುವಂತೆ ಜಯಮ್ಮ ಅವರಿಗೆ ಕಟ್ಟುನಿಟ್ಟಿನಿಂದ ಸೂಚಿಸಿದರು.

ಮೊಬೈಲ್​ ಬಳಸದಂತೆ ಕಿವಿಮಾತು: ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಸರ್ಕಾರ ಗ್ರಂಥಾಲಯದ ಸೌಲಭ್ಯದ ವ್ಯವಸ್ಥೆ ಕಲ್ಪಿಸಿದೆ. ವಿದ್ಯಾರ್ಥಿಗಳು ಅತಿಯಾದ ಮೊಬೈಲ್​ ಬಳಕೆ ಬಿಟ್ಟು, ಹಾಸ್ಟೆಲ್​ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಉತ್ತಮ ವಿದ್ಯಾಭ್ಯಾಸ ಮಾಡಬೇಕು. ಜೀವನದ ಗುರಿ ತಲುಪಿ, ದೇಶದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ವಿದ್ಯಾರ್ಥಿಗಳಿಗೆ ಇಲಾಖೆಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶೋಭಾ ಕಿವಿಮಾತು ಹೇಳಿದರು.

ಮಕ್ಕಳೊಂದಿಗೆ ಊಟ ಸವಿದ ಅಧಿಕಾರಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶೋಭಾ ಅವರು ವಸತಿ ಶಾಲೆಗಳಿಗೆ ಭೇಟಿ ನೀಡಿ, ಶುದ್ಧನಿರಿನ ಘಟಕ ಸೇರಿ ವಿವಿಧ ಸೌಕರ್ಯಗಳನ್ನು ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಬಿಸಿ ಊಟ ಸವಿದರು. ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಹಾಸ್ಟೆಲ್​ ಸಿಬ್ಬಂದಿಗೆ ಸೂಚಿಸಿದರು.

ಕೊರಟಗೆರೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಲವು ವಸತಿ ಶಾಲೆಗಳಿಗೆ ಭೇಟಿ ನೀಡಲಾಗಿದ್ದು, ಕೆಲ ವಸತಿ ನಿಲಯಗಳಲ್ಲಿ ನೀರಿನ ಸಮಸ್ಯೆ, ಸ್ವಚ್ಛತೆ, ಆಹಾರ ಪದಾರ್ಥಗಳಲ್ಲಿ ಶುಚಿತ್ವ ಕಾಪಾಡದೆ ಇರುವುದು ಕಂಡು ಬಂದಿದೆ. ಸಮಸ್ಯೆ ಮರುಕಳಿಸದಂತೆ ಎಚ್ಚರವಹಿಸಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಅಂಬೇಡ್ಕರ್​ ವಸತಿ ನಿಲಯದಲ್ಲಿ ನಿರ್ಮಿತಿ ಕೇಂದ್ರದಿಂದ ಪ್ರತ್ಯೇಕ ಕಂಪ್ಯೂಟರ್​ ಕೇಂದ್ರ ಸ್ಥಾಪಿಸಲಾಗಿದೆ. ಕೆಲ ಕಡೆ ಸರ್ಕಾರದಿಂದ ಸಿಗುವ ಸೌಲಭ್ಯಗಳಲ್ಲಿ ಕುಂಠಿತಗೊಂಡಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.| ಶೋಭಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net