

ಮೈಸೂರು: ವಿದ್ಯಾರ್ಥಿಗಳ ಪ್ರಗತಿ ತರಗತಿಯ ಶಿಕ್ಷಕರ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ ಎಂದು ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ರಾಷ್ಟ್ರೀಯ ಪರೀಕ್ಷಣ ಸೇವೆಯ ಪ್ರಭಾರ ಅಧಿಕಾರಿ ಡಾ.ಪಂಕಜ್ ದ್ವಿವೇದಿ ಹೇಳಿದರು.
ನಗರದ ಸಿಐಐಎಲ್‌ನಲ್ಲಿ ಉರ್ದು ಭಾಷೆಯಲ್ಲಿ ಪರೀಕ್ಷಣ, ಮೌಲ್ಯನಿರ್ಧಾರಣೆ ಕುರಿತು ಬೋಧಕರು, ಸಂಶೋಧನಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 5 ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಯಲ್ಲಿ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರವಣಿಗೆ ಕೌಶಲ ಬೆಳೆಸಬೇಕು. ಬರವಣಿಗೆ ಉನ್ನತಮಟ್ಟದ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳೆಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳ ಭಾವನಾತ್ಮಕ ಮನಸ್ಥಿತಿಯನ್ನು ಮೌಲ್ಯಮಾಪನ ಮಾಡಬೇಕು. ಶಿಕ್ಷಕರು ಸ್ವಂತ ಆಲೋಚನೆ ವ್ಯಕ್ತಪಡಿಸುವ ಬದಲು, ವಿದ್ಯಾರ್ಥಿಗಳ ಅಗತ್ಯತೆಗಳು ಮತ್ತು ನಿರೀಕ್ಷೆ ಅರಿತುಕೊಳ್ಳಬೇಕು ಎಂದರು.
ಶೈಕ್ಷಣಿಕ ಪಠ್ಯಕ್ರಮದ ಹೊರತಾಗಿ ಶಿಕ್ಷಕರು ವೈಜ್ಞಾನಿಕ ವಿಧಾನಗಳು, ಮಾನದಂಡವನ್ನು ಅಳವಡಿಸಿಕೊಳ್ಳಬೇಕು. ಬೋಧನೆ, ಮೌಲ್ಯನಿರ್ಧಾರಣೆ ಪ್ರಕ್ರಿಯೆಗಳೊಂದಿಗೆ, ಬೋಧನೆ ಮತ್ತು ಕಲಿಕೆಯಲ್ಲಿ ಬಳಸುವ ವಸ್ತುಗಳ ವರ್ಗೀಕರಣದ ಬಗ್ಗೆ ತಿಳಿದಿರಬೇಕು ಎಂದರು.
ರಾಷ್ಟ್ರೀಯ ಪರೀಕ್ಷಣ ಸೇವೆಯ ಕಿರಿಯ ಸಂಪನ್ಮೂಲ ವ್ಯಕ್ತಿಗಳಾದ ಡಾ.ಗುಲಾಮ್ ಮೊಹಿಯುದ್ದೀನ್ ಅನ್ಸಾರಿ, ಡಾ.ಮೊಹಮ್ಮದ್ ಸಲೀಂ ಅಹಮದ್, ಸಿಐಐಎಲ್‌ನ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಇದ್ದರು.