

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ ಮನ್ವಿತ್ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ, ನೌಕರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ಆಗ್ರಹಿಸಿದರು
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಲೆಯ ಪ್ರಾಂಶುಪಾಲರು, ವಾರ್ಡನ್ ಹಾಗೂ ಸೆಕ್ಯೂರಿಟಿಯನ್ನು ಸೇವೆಯಿಂದ ವಜಾಗೊಳಿಸಬೇಕು. ಜಿಲ್ಲೆ, ಮೊರಾರ್ಜಿ ಶಾಲೆಗಳಲ್ಲಿ ಹಲವಾರು ಸಮಸ್ಯೆಗಳಿದ್ದು ಅಲ್ಲಿನ ಪ್ರಾಂಶುಪಾಲರು, ವಾರ್ಡ್‌ನ್‌ಗಳು, ಅಡಿಗೆಯವರು. ಕಾವಲುಗಾರರು ಸಮನ್ವಯ ಕೊರತೆಯಿಂದ ಮಕ್ಕಳ ಭವಿಷ್ಯಗಳು ಹಾಳಾಗುತ್ತಿದ್ದು, ಕೇಂದ್ರ ಸರ್ಕಾರದ ವಸತಿ ಶಾಲೆಗಳ ಆಡಳಿತಾತ್ಮಕ ಕ್ರಮವನ್ನು ಜಾರಿ ಮಾಡುವುದರ ಮೂಲಕ ಮಕ್ಕಳ ಪ್ರಾಣ, ಮಾನ ಹಾನಿಯಾಗದಂತೆ ತಡೆಗಟ್ಟುವಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಮಹತ್ತರ ಪಾತ್ರ ವಹಿಸಬೇಕಾಗಿದೆ ಎಂದರು.
ಈ ಕೂಡಲೇ ಜಿಲ್ಲಾಧಿಕಾರಿಗಳಾದ ತಾವು ಈ ಪ್ರಕರಣವನ್ನು ಶೀಘ್ರ ತನಿಖೆಗೆ ಒಳಪಡಿಸಿ ಸಂಬಂಧಪಟ್ಟ ವಸತಿ ಶಾಲೆಯ ಅಧಿಕಾರಿ ನೌಕರರಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ತನಿಖೆಗೆ ಅವಕಾಶವಾಗುವಂತೆ ಈ ಕೂಡಲೇ ಸೆಕ್ಯೂರಿಟಿಗಳನ್ನು ವಜಾಗೊಳಿಸಬೇಕು ಎಂದು ರಾಜಣ್ಣ ಒತ್ತಾಯಿಸಿದರು.
ಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಗುಂಡ್ಲುಪೇಟೆ ನಂಜುಂಡಸ್ವಾಮಿ, ಕೊಳ್ಳೇಗಾಲ ಶಿವಕುಮಾರ್, ಗುಂಡ್ಲುಪೇಟೆ ತಾಲೂಕು ಸಂಚಾಲಕ ರಂಗಸ್ವಾಮಿ ಮಾಡ್ರಹಳ್ಳಿ, ಕೊಳ್ಳೇಗಾಲ ತಾಲೂಕು ಸಂಚಾಲಕ ಶಾಂತರಾಜು ಹಾಜರಿದ್ದರು.