

ಚಿತ್ರದುರ್ಗ: ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಷಿಪ್‌ಗೆ 2024-25 ನೇ ಸಾಲಿನ ಪರೀಕ್ಷೆಯಲ್ಲಿ ತೇರ್ಗಡೆಯಾದ ಜಿಲ್ಲೆಯ 163 ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿರುತ್ತಾರೆ. ಈ ಯೋಜನೆಯಡಿ ಜಿಲ್ಲೆಗೆ 165 ವಿದ್ಯಾರ್ಥಿಗಳ ಆಯ್ಕೆಗೆ ಗುರಿ ನಿಗದಿಪಡಿಸಲಾಗಿತ್ತು. ಶೇ. 99 ಗುರಿ ಸಾಧನೆಯಾಗಿದೆ ಎಂದು ಡಯಟ್ ಉಪನ್ಯಾಸಕ ಎಲ್. ರೇವಣ್ಣ ತಿಳಿಸಿದ್ದಾರೆ. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ 8ನೇ ತರಗತಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ 2025-26 ನೇ ಸಾಲಿನಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿಗಳಿಗೆ 9 ರಿಂದ 12 ತರಗತಿವರೆಗೆ ನಾಲ್ಕು ವರ್ಷಗಳ ಕಾಲ ಪ್ರತಿ ತಿಂಗಳು ಒಂದು ಸಾವಿರ ರೂ.ವಿದ್ಯಾರ್ಥಿ ವೇತನ ಸಿಗಲಿದೆ. ಹೊಸದುರ್ಗ ತಾಲೂಕು 59, ಚಿತ್ರದುರ್ಗ-30, ಚಳ್ಳಕರೆ -21, ಮೊಳಕಾಲ್ಮೂರು-20, ಹೊಳಲ್ಕೆರೆ- 17 ಹಾಗೂ ಹಿರಿಯೂರು ತಾಲೂಕಿನ 16 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.