

ಮೈಸೂರು:2021-22ನೇ ಶೈಕ್ಷಣಿಕ ಸಾಲಿನ ಬಾಕಿ ಇರುವ ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಪ್ರತಿಭಟಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿವರ್ಷ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ತಮ್ಮ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನವನ್ನು ಪೂರಕವಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಈ ಸಲ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ಈ ತಂತ್ರಾಂಶದಲ್ಲಿ ವಿದ್ಯಾರ್ಥಿ ವೇತನ ಬಿಡುಗಡೆ ಆಗಿರುವುದಾಗಿ ನಮೂದಿಸಲಾಗಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಕ್ಕಿಲ್ಲ ಎಂದು ದೂರಿದರು.
ಸರ್ಕಾರವು ಗಮನ ಹರಿಸಿ ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನವನ್ನು ಬಿಡುಗಡೆಗೊಳಿಸಬೇಕು. ಈ ವಿದ್ಯಾರ್ಥಿ ವೇತನದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020(ಎನ್‌ಇಪಿ) ಎನ್‌ಇಪಿ ಅನುಷ್ಠಾನವಾದ ಬಳಿಕ ಎಲ್ಲ ವಿಶ್ವವಿದ್ಯಾಲಯಗಳು ಯುಯುಸಿಎಂಎಸ್ ತಂತ್ರಾಂಶವನ್ನು ಬಳಸಿ, ದಾಖಲಾತಿಯಿಂದ ಲಿತಾಂಶದವರೆಗೆ ಎಲ್ಲ ರೀತಿಯ ಮಾಹಿತಿ ನಮೂದಿಸಬೇಕಾಗಿದೆ. ಆದರೆ ಈ ತಂತ್ರಾಂಶದಲ್ಲಿರುವ ಕೆಲವು ಸಮಸ್ಯೆಗಳಿಂದ ಹಾಸ್ಟೆಲ್‌ಗೆ ಅರ್ಜಿ ಸಲ್ಲಿಸಲು, ಬೇರೆ ಕಾಲೇಜಿಗೆ ವರ್ಗಾವಣೆ ಪಡೆಯಲು, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ. ವಿವಿಗಳು ಸಕಾಲಕ್ಕೆ ಲಿತಾಂಶ ನೀಡದೇ ಇರುವುದರಿಂದ ಹಲವಾರು ರೀತಿಯ ಸಮಸ್ಯೆಯನ್ನು ವಿದ್ಯಾರ್ಥಿಗಳು ಎದುರಿಸಬೇಕಾಗಿದೆ. ಆದ್ದರಿಂದ ತಂತ್ರಾಂಶವನ್ನು ಸರಿಪಡಿಸಿ ಸಮಸ್ಯೆ ನಿವಾರಣೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ಎಬಿವಿಪಿ ಜಿಲ್ಲಾ ಸಂಚಾಲಕ ಎಂ. ಶಿವು, ಕಾರ್ಯದರ್ಶಿ ದಿನೇಶ್, ಮುಖಂಡರಾದ ನಮಿತಾ, ನಮ್ರತಾ, ಶ್ರೇಯಸ್ ಇನ್ನಿತರರು ಇದ್ದರು.