ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡುವಂತೆ ಎಬಿವಿಪಿ ಪ್ರತಿಭಟನೆ

ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡುವಂತೆ ಎಬಿವಿಪಿ ಪ್ರತಿಭಟನೆ
Published on

ಹಾಸನ : 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಬಾಕಿಯಿರುವ ವಿದ್ಯಾರ್ಥಿ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಹಾಗೂ ಯುಯುಸಿಎಂಎಸ್ ತಂತ್ರಾಂಶವನ್ನು ಸರಿಪಡಿಸಿ ಫಲಿತಾಂಶವನ್ನು ಪ್ರಕಟಿಸುವಂತೆ ಆಗ್ರಹಿಸಿ ಗುರುವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ವತಿಯಿಂದ ನಗರದ ಹೇಮಾವತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.

ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೌಶಿಕ್ ಮಾತನಾಡಿ ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿ ವರ್ಷ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ತಮ್ಮ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನದಿಂದ ಬರುವ ಹಣವನ್ನು ಪೂರಕವಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ, ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ಈ ತಂತ್ರಾಂಶದಲ್ಲಿ ವಿದ್ಯಾರ್ಥಿ ವೇತನ ಬಿಡುಗಡೆ ಆಗಿರುವುದಾಗಿ ನಮೂದಿಸಲಾಗಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆತಿರುವುದಿಲ್ಲ ಎಂದು ಆರೋಪಿಸಿದರು.

ಈ ಕೂಡಲೇ ಸರ್ಕಾರವು ಈ ವಿಷಯದ ಕುರಿತು ಗಮನವನ್ನು ಹರಿಸಿ ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನದ ಹಣವನ್ನು ಬಿಡುಗಡೆಗೊಳಿಸಬೇಕಾಗಿ ಹಾಗೂ ಈ ವಿದ್ಯಾರ್ಥಿವೇತನದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆಯು ಸೂಕ್ತ ತನಿಖೆ ನಡೆಸಯವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದರು.

ಎನ್‌ಇಪಿ ಜಾರಿಯಾದ ನಂತರ ಎಲ್ಲಾ ವಿಶ್ವವಿದ್ಯಾನಿಲಯಗಳು ಯುಯುಸಿಎಂಎಸ್ ತಂತ್ರಾಂಶವನ್ನು ಬಳಸಿ, ದಾಖಲಾತಿಯಿಂದ ಫಲಿತಾಂಶದವರೆಗೆ ಎಲ್ಲಾ ರೀತಿಯ ಮಾಹಿತಿಗಳನ್ನು ಇದರ ಮೂಲಕವೇ ನಮೂದಿಸಬೇಕಾಗಿದೆ. ಆದರೆ ಈ ತಂತ್ರಾಂಶದಲ್ಲಿರುವ ಕೆಲವು ಸಮಸ್ಯೆಗಳಿಂದಾಗಿ, ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಲು, ಬೇರೆ ಕಾಲೇಜಿಗೆ ವರ್ಗಾವಣೆ ಪಡೆಯಲು, ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿದೆ ಎಂದು ದೂರಿದರು.
ವಿಶ್ವವಿದ್ಯಾಲಯಗಳು ಸರಿಯಾದ ರೀತಿಯಲ್ಲಿ ಫಲಿತಾಂಶವನ್ನು ನೀಡದೆ ಇರುವುದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ವಿದ್ಯಾರ್ಥಿ ಸಮೂಹ ಎದುರಿಸುತ್ತಿದ್ದು ಈ ಕೂಡಲೇ ಅವುಗಳನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿ ಮೂಕಲ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.

ಮನೋಜ್ ಕುಮಾರ್ ಕಾರ್ಯಕರ್ತರಾದ ಸಿಂಚನ, ದಿವ್ಯಶ್ರೀ, ಭರತ್, ಕುಮಾರ್, ಪ್ರೀತಂ, ವೀರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net