

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ವಿದ್ಯಾರ್ಥಿ ಪರ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಎಐಡಿಎಸ್‌ಒನಿಂದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಬಾರಿ ಬಜೆಟ್‌ನಲ್ಲಿ ಶಿಕ್ಷಣದ ಅಗತ್ಯಗಳು ಮತ್ತು ಶೈಕ್ಷಣಿಕ ಸವಾಲುಗಳಿಗೆ ಉತ್ತರವಾಗಿ, ವಿದ್ಯಾರ್ಥಿ ಪರವಾದ ಬಜೆಟ್ ಆಗಿ ರೂಪುಗೊಳ್ಳಲಿದೆ ಎಂಬ ನಿರೀಕ್ಷೆ ಇದೆ. ಮೈಸೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಯೋಜನೆ ಮರು ಜಾರಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಹೆಚ್ಚಿನ ಅನುದಾನ ನೀಡಬೇಕು ಎಂದು ಕೋರಲಾಯಿತು.
ಸರ್ಕಾರದ ಅನುದಾನದಿಂದಲೇ ವಿಶ್ವವಿದ್ಯಾಲಯಗಳ ನಿರ್ವಹಣೆ ಮಾಡಬೇಕಾಗಿರುವುದರಿಂದ ವಿ.ವಿ.ಗಳಿಗೆ ತಕ್ಕ ಅನುದಾನ ಒದಗಿಸಬೇಕು. ಸ್ಥಗಿತಗೊಂಡಿರುವ ಸೈಕಲ್ ವಿತರಣೆ, ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಟ್ಯಾಬ್ ವಿತರಣೆ ಪುನರಾರಂಭಿಸಬೇಕು ಎಂದು ಕೋರಿದರು.
ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಮೂಲಸೌಲಭ್ಯ ಒದಗಿಸಬೇಕು, ರಾಯಚೂರಿನಲ್ಲಿ ಎಐಐಎಂಎಸ್ ಸ್ಥಾಪನೆ, ಕಲಬುರಗಿಯ ವಾಡಿ ಪಟ್ಟಣದಲ್ಲಿ ಒಂದು ಸರ್ಕಾರಿ ಪಿಯು ಕಾಲೇಜು ಸ್ಥಾಪನೆ, ನೂತನವಾಗಿ ಸ್ವಯಂ ಹಣಕಾಸು ಸಂಸ್ಥೆಗಳನ್ನಾಗಿ ರಚಿಸಿರುವ ಸರ್ಕಾರಿ ಪದವಿ ಕಾಜೇಜುಗಳು ಹಾಗೂ ಸರ್ಕಾರಿ ಕ್ಲಸ್ಟರ್ ವಿವಿಗಳಿಗೆ ಅನುದಾನ ನೀಡಬೇಕು. ಸ್ವಯಂ ಹಣಕಾಸು ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಮೈಸೂರಿನ ಮಹಾರಾಣಿ ಕಲಾ ಹಾಗೂ ವಿಜ್ಞಾನ ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳನ್ನು ನಿರ್ಮಿಸುವ ಜತೆಗೆ ಕುಸಿದು ಬಿದ್ದಿರುವ ರಸಾಯನಶಾಸ್ತ್ರ ಪ್ರಯೋಗಾಲಯವನ್ನು ಮರು ನಿರ್ಮಿಸಬೇಕು. ಕಾಲೇಜಿನ ಆವರಣದೊಳಗೆ ಇಂದಿರಾ ಕ್ಯಾಂಟೀನ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಜತೆಗೆ ಮೂಲ ಸೌಕರ್ಯ ಒದಗಿಸಬೇಕು. ಮಹಾರಾಣಿ ವಾಣಿಜ್ಯ ಕಾಲೇಜಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಇದ್ದರು.