

ಹಾಸನ: ರಾಜ್ಯದ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ಹಾಗೂ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಲು ನಮ್ಮ ತಂಡವು ವಿದ್ಯಾರ್ಥಿ ನ್ಯಾಯ ಯಾತ್ರೆ ಎಂಬ ಮಹತ್ವಾಕಾಂಕ್ಷಿ ಪ್ರಯತ್ನವನ್ನು ಆರಂಭಿಸಿದೆ. ಈ ಪ್ರಯತ್ನದ ಭಾಗವಾಗಿ, ನಾವು ಹಾಸನ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು ಪರೀಕ್ಷಾಂಗ, ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್ ತಿಳಿಸಿದರು.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ, ಸಮರ್ಪಕ ವಿದ್ಯಾರ್ಥಿವೇತನ ವಿತರಣಾ ವ್ಯವಸ್ಥೆ, ಹಾಸ್ಟೆಲ್ ವ್ಯವಸ್ಥೆಯ ಸುಧಾರಣೆ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗಾವಕಾಶಗಳ ಹೆಚ್ಚಳ, ಡ್ರಗ್ಸ್ ಮತ್ತು ರ‌್ಯಾಗಿಂಗ್ ಪಿಡುಗು ನಿರ್ಮೂಲನೆ, ವಿದ್ಯಾರ್ಥಿನಿಯರ ಸುರಕ್ಷತೆ, ಸರ್ಕಾರಿ ವಿದ್ಯಾಸಂಸ್ಥೆಗಳ ಬಲವರ್ಧನೆ, ಕರ್ನಾಟಕ ವಿದ್ಯಾರ್ಥಿ ಹಿತ ಮಸೂದೆ ಜಾರಿಗೆ ತರುವಿಕೆ, ಪೇಪರ್ ಲೀಕ್ ತಡೆಗಟ್ಟುವಿಕೆ ಈ ಎಲ್ಲ ವಿಷಯಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಒಕ್ಕೂಟದ ರಾಷ್ಟ್ರೀಯ ಸಂಯೋಜಕ ಹೃತ್ವಿಕ್ ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮನೀಶ್ ಜಿ. ರಾಜ್, ಶಿವಕುಮಾರ್, ಎನ್‌ಎಸ್‌ಯುಐ ಅಧ್ಯಕ್ಷ ಸುಪ್ರೀತ್ ಗೌಡ, ಉಪಾಧ್ಯಕ್ಷ ಅಭಿಲಾಷ್, ಪುಣ್ಯಾ ಉಪಸ್ಥಿತರಿದ್ದರು.