ವಿದ್ಯಾರ್ಥಿ ನಿಲಯಕ್ಕೆ ಕಲ್ಲು ತೂರಾಟ

23 BGV 3 imam 10-Web
ಬೆಳಗಾವಿಯ ಸಂಗಮೇಶ್ವರ ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯಕ್ಕೆ ಕಲ್ಲು ತೂರಿದ್ದರಿಂದ ಕಿಟಕಿಯ ಗಾಜು ಒಡೆದಿರುವುದು.
Published on

ಬೆಳಗಾವಿ: ಸಂಗಮೇಶ್ವರ ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯಕ್ಕೆ ಭಾನುವಾರ ರಾತ್ರಿ ನುಗ್ಗಿದ 20ಕ್ಕೂ ಹೆಚ್ಚು ಜನರಿದ್ದ ಗುಂಪೊಂದು ಕಲ್ಲು ತೂರಾಟ ನಡೆಸಿದ್ದು, ಹಾಸ್ಟೆಲ್‌ನ ಹತ್ತಕ್ಕೂ ಹೆಚ್ಚು ಕಿಟಕಿಗಳ ಗಾಜು ಒಡೆದಿದ್ದಾರೆ. ಅಲ್ಲದೆ, ಆವರಣದಲ್ಲಿದ್ದ ಬೈಕ್ ಹಾಗೂ ಸೈಕಲ್‌ಗಳನ್ನು ಜಖಂಗೊಳಿಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದ ಆತಂಕಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಘಟನೆ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಉಮಾ ಸಾಲಿಗೌಡರ ಹಾಗೂ ಎಪಿಎಂಸಿ ಠಾಣೆ ಸಿಪಿಐ ಜಾವೀದ್ ಮುಷಾಪುರಿ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಸಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದಿದ್ದಾರೆ. ನಿಲಯದ ಕೆಲ ವಿದ್ಯಾರ್ಥಿಗಳು ಯುವತಿಯನ್ನು ಚುಡಾಯಿಸಿದ ಹಿನ್ನೆಲೆಯಲ್ಲಿ ಕುಪಿತಗೊಂಡಿದ್ದ ಕೆಲ ಯುವಕರು ಹಾಸ್ಟೆಲ್‌ಗೆ ಆಗಮಿಸಿ ಕಲ್ಲು ತೂರಿದ್ದಾರೆ ಎಂದು ತಿಳಿದು ಬಂದಿದೆ. ಯುವಕರ ಗುಂಪು ಕಟ್ಟಿಗೆ, ರಾಡ್ ಜತೆಗೆ ಆಗಮಿಸಿದ್ದ ದೃಶ್ಯ ಹಾಸ್ಟೆಲ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಜಾವೀದ್ ಮುಷಾಪುರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net