ವಿದ್ಯಾರ್ಥಿ ನಿಗೂಢ ನಾಪತ್ತೆ

Capture2
Published on

ಬೀದರ್: ಶಾಹೀನ್ ಕಾಲೇಜಿನ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿ ಶಶಿಧರ ಜೋಶಿ (17) ನಿಗೂಢ ಕಾಣೆಯಾಗಿದ್ದು, ಪಾಲಕರು ಆತಂಕಗೊಂಡಿದ್ದಾರೆ. ಶಾಸ್ತ್ರಿ ನಗರ ಬಡಾವಣೆ ನಿವಾಸಿ ಶಶಿಧರ ಶನಿವಾರ ಎಂದಿನಂತೆ ಕಾಲೇಜಿಗೆ ಹೋಗಿ ಮಧ್ಯಾಹ್ನ ಮನೆಗೆ ಬಂದಿದ್ದಾನೆ. ಸಂಜೆ ಆಟವಾಡಲು ಹೊರಗಡೆ ಹೋದವ ತಿರುಗಿ ಬಂದಿಲ್ಲ. ರಾತ್ರಿಯಾದರೂ ಮಗ ಮನೆಗೆ ಬಾರದ ಕಾರಣ ಆತಂಕಗೊಂಡ ಪಾಲಕರು ಬಡಾವಣೆಯಲ್ಲಿ ಹುಡುಕಾಟ ನಡೆಸಿ ಸಂಬಂಧಿಕರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ. ನನ್ನ ಮಗ ಆಟವಾಡಲು ಮನೆಯಿಂದ ಹೊರಗೆ ಹೋದಾಗ ಯಾರೋ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ತಂದೆ ವೇದಪ್ರಕಾಶ ಜೋಶಿ ಗಾಂಧಿಗಂಜ್ ಠಾಣೆಗೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಶಶಿಧರ ಬಳಿ ಮೊಬೈಲ್ ಇಲ್ಲ. ಆದರೆ ಬೇರೆಯವರ ಫೋನ್ ಪಡೆದು ಸ್ನೇಹಿತರಿಗೆ ಕರೆ ಮಾಡುತ್ತಿದ್ದಾನೆ. ನಾನು ಮುಂಬಯಿಯಲ್ಲಿ ಇರುವೆ ಎಂದು ಹೇಳಿ ಕಾಲ್ ಕಟ್ ಮಾಡುತ್ತಿದ್ದಾನೆ ಎಂದು ಸ್ನೇಹಿತರು ಪಾಲಕರಿಗೆ ತಿಳಿಸಿದ್ದಾರೆ. ಹೀಗಾಗಿ ಪಾಲಕರು ಆತಂಕದಲ್ಲಿ ಇದ್ದಾರೆ. ಅಪಹರಣವೋ ಅಥವಾ ನಾಪತ್ತೆಯೋ ಎಂಬುದು ಪೊಲೀಸರ ತನಿಖೆಯಿಂದಲೇ ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net