

ಮುದ್ದೇಬಿಹಾಳ: ಸಾಧನೆಗೆ ಶ್ರದ್ದೆ, ನಿಷ್ಠೆ, ಸಮಯ ಪರಿಪಾಲನೆ ಶಿಸ್ತು, ಜತೆಗೆ ಶಿಕ್ಷಕರು ಪಾಠ ಮಾಡುವಾಗ ಏಕಾಗ್ರತೆಯಿಂದ ಕೇಳಿಸಿಕೊಳ್ಳಬೇಕು. ತಿಳಿಯದಿದ್ದರೆ ಪ್ರಶ್ನೆ ಕೇಳುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಯುಪಿಎಸ್ಸಿಯಲ್ಲಿ 890ನೇ ರ‌್ಯಾಂಕ್ ಪಡೆದ ಯಲಗೂರೇಶ ನಾಯಕ ಹೇಳಿದರು.
ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಸಂತ ಕನಕದಾಸ ಶಾಲೆಯಲ್ಲಿ ಓದಿದ್ದೇನೆ. ನಮ್ಮ ಕಡೆ ಜನ ನಾಚಿಕೆ ಸ್ವಭಾವದವರು. ನಾವು ಧೈರ್ಯಶಾಲಿಗಳು. ಆದರೆ ಮುಂದೆ ಬಂದು ಕೇಳುವಷ್ಟು ಧೈರ್ಯ ನಮ್ಮಲ್ಲಿ ಇಲ್ಲ. ವಿದ್ಯಾರ್ಥಿ ಜೀವನ ಅಂದರೆ ಬಂಗಾರದ ಜೀವನ. ಇದನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಿ. ನನ್ನ ಈ ಬೆಳವಣಿಗೆಗೆ ಕಾರಣೀಕರ್ತರಾದ ನನ್ನ ಗುರುಗಳನ್ನು ನಾನು ಯಾವತ್ತಿಗೂ ಮರೆಯಲಾರೆ. ನಾನು ಕಲಿತಿರುವ ಈ ಶಾಲೆಯಲ್ಲಿ ನನಗಿಂತ ಹೆಚ್ಚಿನ ಸ್ಥಾನದಲ್ಲಿ ನೀವುಗಳು ಬೆಳೆಯಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಸಂತ ಕನಕದಾಸ ಶಾಲೆಯ ಅಧ್ಯಕ್ಷ ಮಲಕೇಂದ್ರಗೌಡ ಪಾಟೀಲ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಓದಿರುವ ವಿನಯಾ ಹೂಗಾರ ತಹಶೀಲ್ದಾರ್ ಆಗಿ ಸೇವೆಯಲ್ಲಿದ್ದಾರೆ. ಸರೂರಿನ ಯಲಗೂರೇಶ ನಾಯಕ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿದ್ದಾರೆ. ಈ ಶ್ರೇಯಸ್ಸು ಶಿಕ್ಷಕರಿಗೆ ಸಲ್ಲಬೇಕು ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್. ಮದರಿ, ಪ್ರಧಾನ ಕಾರ್ಯದರ್ಶಿ ಎಲ್.ಎಸ್.ಮೇಟಿ, ಕಾರ್ಯದರ್ಶಿ ಬಿ.ಎಸ್.ಮೇಟಿ, ಸಂಘಟನಾ ಕಾರ್ಯದರ್ಶಿ ನಾಗಪ್ಪ ರೂಢಗಿ, ಬಸವರಾಜ ಬಾಗೇವಾಡಿ, ಉದ್ಯಮಿ ಮುತ್ತಣ್ಣ ಮದರಿ, ಪ್ರೌಢಶಾಲೆ ಮುಖ್ಯಗುರು ಬಿ.ಎಸ್. ಪಣೇದಕಟ್ಟಿ, ಪ್ರಾಥಮಿಕ ಶಾಲೆಯ ಮುಖ್ಯಗುರು ಎಂ.ಎನ್. ಯರಝರಿ ಹಾಗೂ ಶಾಲೆಯ ಶಿಕ್ಷಕರಿದ್ದರು. ಎಸ್.ಆರ್. ಕುರಿ ಸ್ವಾಗತಿಸಿದರು. ಎಂ.ಸಿ. ಕಬಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಹೂಗಾರ ನಿರೂಪಿಸಿ ವಂದಿಸಿದರು.