ವಿದ್ಯಾರೂಪೇ ವಿಶಾಲಾಕ್ಷಿ ವಿದ್ಯಾಂ ದೇಹಿ ನಮತಃ…

Kali Kamateshwari Devi
Published on

ಚಿತ್ರದುರ್ಗ: ಸರಸ್ವತಿ ಮಹಾಭಾಗೇ ವಿದ್ಯೆ ಕಮಲಲೋಚನೇ, ವಿದ್ಯಾರೂಪೇ ವಿಶಾಲಾಕ್ಷಿ ವಿದ್ಯಾಂ ದೇಹಿ ನಮೋಸ್ತುತೇ…

ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಏಳನೇ ದಿನವಾದ ಬುಧವಾರ ವಿದ್ಯಾದೇವಿ ಸರಸ್ವತಿ, ಕಾಲರಾತ್ರಿ ದೇವಿಯ ಆರಾಧನೆಯ ವೇಳೆ ಜಿಲ್ಲೆಯ ಹಲವು ಶಕ್ತಿದೇವತೆಗಳ ದೇಗುಲಗಳಲ್ಲಿ ಮೊಳಗಿದ ಮಂತ್ರವಿದು. ಅಲ್ಲದೆ, ವಿಶೇಷ ಪೂಜೆ, ಅಲಂಕಾರ ಸೇವೆ, ಪ್ರಾರ್ಥನೆಗಳು ನೆರವೇರಿದವು.

ಹಲವು ದೇಗುಲಗಳಿಗೆ ಬೆಳಗ್ಗೆ 5ರಿಂದ ರಾತ್ರಿ 8ರವರೆಗೂ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು. ದೇವಿಯ ಅಲಂಕಾರ ಕಣ್ತುಂಬಿಕೊಂಡರು. ದೇವಿ ಪುರಾಣ ಪಾರಾಯಣ, ಶಾರದಾಂಬೆ ಮಂತ್ರ ಪಠಣ, ಭಜನೆ ಸೇರಿ ದೇವಿಗೆ ಶ್ರದ್ಧಾ-ಭಕ್ತಿ ಸಮರ್ಪಿಸಿದರು.

ಬರಗೇರಮ್ಮ ದೇವಿಗೆ ಕಾಲ ರಾತ್ರಿ, ಉಚ್ಚಂಗಿ ಯಲ್ಲಮ್ಮ ದೇವಿಗೆ ಗೆಜ್ಜೆ ವಸ್ತ್ರ, ಕಾಳಿಕಮಠೇಶ್ವರಿ ದೇವಿಗೆ ಸಾವಿರಾರು ಎಲೆಗಳಿಂದ ಸರಸ್ವತಿ ಮಾತೆ ಮಾದರಿ, ಏಕನಾಥೇಶ್ವರಿ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಕಣಿವೆ ಮಾರಮ್ಮ, ಇಂಗಳದಾಳ್ ಮಾರಿಕಾಂಬ ದೇವಿಗೆ ಪುಷ್ಪಾಲಂಕಾರ ಸೇವೆ ಜರುಗಿತು.

ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಬೊಗಳೇರಹಟ್ಟಿ ದುರ್ಗಾಂಬಿಕಾ, ತಾಲೂಕಿನ ಮೆದೇಹಳ್ಳಿ ಭೋವಿ ಕಾಲನಿಯ ಕೊಲ್ಲಾಪುರದ ಮಹಾಲಕ್ಷ್ಮೀ, ದೊಡ್ಡಸಿದ್ಧವ್ವನಹಳ್ಳಿಯ ಕಾಳಿಕಾ ದೇವಿಗೆ ವಿಶೇಷ ಅಲಂಕಾರ ನೆರವೇರಿತು.

ಚೌಡೇಶ್ವರಿ, ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ಚಾಮುಂಡೇಶ್ವರಿ ದೇವಿ ದೇಗುಲಗಳಲ್ಲೂ ವಿಶೇಷ ಪೂಜೆ ಜರುಗಿದವು.

ತಾಲೂಕಿನ ಲಕ್ಷ್ಮೀಸಾಗರ ಗೇಟ್ ಸಮೀಪದ ತುಳಜಾ ಭವಾನಿ, ಕೆಳಗೋಟೆಯ ಮರಾಠ ವಿದ್ಯಾವರ್ಧಕ ಸಂಘದ ಅಂಬಾ ಭವಾನಿ ದೇಗುಲದಲ್ಲೂ ದೇವಿ ಮೂರ್ತಿಗೆ ವಿಶೇಷಾಲಂಕಾರ ನೆರವೇರಿತು. ಹಲವೆಡೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.

ವಿದ್ಯೆಗೆ ಅಧಿದೇವತೆಯಾದ ಶಾರದೆಯೂ ಸದ್ಭಕ್ತರ ಹರಕೆಗಳನ್ನು ಈಡೇರಿಸಿ, ಸಕಲರಿಗೂ ಜ್ಞಾನ, ಆರೋಗ್ಯ, ನೆಮ್ಮದಿ, ಸೌಖ್ಯ, ಶ್ರೇಯೋಭಿವೃದ್ಧಿ ಕರುಣಿಸಲೆಂಬ ಪ್ರಾರ್ಥನೆಯೊಂದಿಗೆ ಭಕ್ತಿಪೂರ್ವಕ ಆರಾಧನೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net