ವಿದ್ಯಾಭ್ಯಾಸ ಮೊಟಕುಗೊಳಿಸದಿರಿ

2408-Kpl-Ravi-3
Published on

ಕೊಪ್ಪಳ: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ. ಇದೆ ಹೀಗಾಗಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ಮೊಟಕುಗೊಳಿಸಬಾರದು ಎಂದು ಡಿಎಚ್‌ಒ ಡಾ.ಟಿ.ಲಿಂಗರಾಜು ಹೇಳಿದರು.


ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.


ಸ್ತ್ರೀ ಎಂದರೆ ಶಕ್ತಿ. ನೀವೆಲ್ಲ ಉನ್ನತ ಶಿಕ್ಷಣ ಪಡೆಯಬೇಕು. ಯಾವುದೋ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸಬಾರದು. ಮನೆಯಲ್ಲಿ ಸಮಸ್ಯೆಗಳು ಇರುವುದು ಸಾಮಾನ್ಯ. ಸರ್ಕಾರವೂ ಮಹಿಳಾ ಶಿಕ್ಷಣ ಪ್ರೋತ್ಸಾಹಕ್ಕೆ ಹತ್ತಾರು ಯೋಜನೆ ಜಾರಿಗೊಳಿಸಿದೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ. ಉತ್ತಮವಾಗಿ ಪರೀಕ್ಷೆ ಎದುರಿಸಿ, ಭವಿಷ್ಯ ಕಟ್ಟಿಕೊಳ್ಳಿ. ದೇಶಕ್ಕೆ ಉತ್ತಮ ಪ್ರಜೆಗಳಾಗಿ ಎಂದರು.


ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸಾವಿತ್ರಿ ಬಾಯಿ ಪುಲೆ ಮಹಿಳಾ ಶಿಕ್ಷಣದ ಕ್ರಾಂತಿ ಮಾಡಿದರು. ದೇಶದಲ್ಲಿ ಮಹಿಳಾ ಶಿಕ್ಷಣಕ್ಕೆ ಆದ್ಯತೆ ಹೆಚ್ಚಬೇಕಿದೆ. ಯಾವುದೇ ಆಗಲಿ ಸುಲಭಕ್ಕೆ ಸಿಗುವುದಿಲ್ಲ. ಹೀಗಾಗಿ ಕಠಿಣ ಪರಿಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಮಹಾನ್ ನಾಯಕರ ಆದರ್ಶ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.


ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ವಿಠೋಬ ಎಸ್. ಮಾತನಾಡಿದರು. ಪ್ರಾಚಾರ್ಯ ಡಾ.ಗಣಪತಿ ಲಮಾಣಿ, ಪ್ರಾಧ್ಯಾಪಕಿ ಹುಲಿಗೆಮ್ಮ, ನಗರಸಭೆ ಸದಸ್ಯ ಗುರುರಾಜ ಹಲಗೇರಿ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net