

ಮಡಿಕೇರಿ: ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಬಣ್ಣದ ಲೋಕವೇ ಸೃಷ್ಟಿಯಾಗಿತ್ತು. ನಿಸರ್ಗದ ರಮಣೀಯತೆ, ಸಾಮಾಜಿಕ ವ್ಯವಸ್ಥೆ, ಪ್ರಾಣಿ ಪ್ರಪಂಚ, ಕ್ರೀಡಾ ಪ್ರೇಮದಂತಹ ವಿಭಿನ್ನ ಶೈಲಿಯ ಚಿತ್ರಗಳು ಕಣ್ಮನ ಸೆಳೆದವು.
ನಾನಾ ಬಗೆಯ ಸುಮಾರು 250 ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಆದರೆ, ಇವುಗಳನ್ನು ರಚಿಸಿರುವವರು ವೃತ್ತಿನಿರತ ಅಥವಾ ಹವ್ಯಾಸಿ ಕಲಾವಿದರಲ್ಲ, ಪುಟಾಣಿಗಳು ಎನ್ನುವುದು ವಿಶೇಷ. ಕಲಾಭಾರತಿ ಸಂಸ್ಥೆಯ ವಿದ್ಯಾರ್ಥಿಗಳು ರಚಿಸಿರುವ ವರ್ಣಮಯ ಚಿತ್ರಗಳು ಕಲಾರಸಿಕರ ಮನ ಸೆಳೆಯುವಂತಿವೆ.
ಭಾರತೀಯ ವಿದ್ಯಾಭವನ ಕಲಾ ಭಾರತಿ ಸಂಸ್ಥೆ 20 ವರ್ಷಗಳಿಂದ ಮಕ್ಕಳಿಗೆ ಚಿತ್ರಕಲಾ ಪ್ರದರ್ಶನದ ಮೂಲಕ ವೇದಿಕೆ ಒದಗಿಸುತ್ತಿದೆ. ತರಬೇತುದಾರ ಪ್ರಸನ್ನಕುಮಾರ್ ಮಕ್ಕಳಿಗೆ ಚಿತ್ರಕಲೆ ಹೇಳಿಕೊಡುತ್ತಿದ್ದು, ವರ್ಷವಿಡೀ ಕಲಿತ ಮಕ್ಕಳು ರಚಿಸಿದ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇಲ್ಲಿ ಚಿತ್ರಕಲಾ ತರಬೇತಿ ಪಡೆಯುವ ಮಕ್ಕಳು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ. ಭಾನುವಾರ ಆರಂಭಗೊಂಡಿರುವ ಚಿತ್ರಕಲಾ ಪ್ರದರ್ಶನ ಶುಕ್ರವಾರದವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ.
ಆಸಕ್ತಿಯ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡಿ: ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಭಾನುವಾರ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದರು.
ಕಲಾವಿದರಿಗೆ ಸರಸ್ವತಿಯ ಕೃಪೆ ಇರುತ್ತದೆ. ಇದರೊಂದಿಗೆ, ಲಕ್ಷ್ಮೀದೇವಿಯ ಕೃಪೆಯೂ ಮುಖ್ಯವಾಗಿರುತ್ತದೆ. ಮಕ್ಕಳ ಮನಸ್ಸಿನಲ್ಲಿ ನೋವಿನ ಚಿತ್ರಣಗಳು ಮೂಡುವುದಿಲ್ಲ. ಅವರು ಬಿಡಿಸುವ ಚಿತ್ರಗಳು ಸಂತೋಷ ಮತ್ತು ಗೆಲುವನ್ನು ಒಳಗೊಂಡಿರುತ್ತದೆ. ಮಕ್ಕಳಲ್ಲಿ ನಕಾರಾತ್ಮಕ ಚಿಂತನೆಗಳು ಬರದಂತೆ ನೋಡಿಕೊಳ್ಳಬೇಕು. ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಲಲಿತ ಕಲೆಗಳಿಂದ ಸಮಾಜ ಜೀವಂತಿಕೆ: ಮಕ್ಕಳ ತಜ್ಞ ಡಾ.ನವೀನ್‌ಕುಮಾರ್ ಮಾತನಾಡಿ, ಮನುಷ್ಯ ಜೀವಂತವಾಗಿ ಬದುಕಲು ಹೃದಯ ಬೇಕು. ಆ ಹೃದಯದ ಬಡಿತ ನಿಂತರೆ ಮನುಷ್ಯ ಸಾಯುತ್ತಾನೆ. ಅಂತೆಯೆ, ಸಮಾಜ ಜೀವಂತವಾಗಿರಲು ಲಲಿತಕಲೆ ಅಗತ್ಯ. ಅದಿಲ್ಲದಿದ್ದರೆ ಸಮಾಜ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಲಲಿತ ಕಲೆಗಳು ಬಹಳ ಮುಖ್ಯ. ಇವುಗಳು ನಮ್ಮಲ್ಲಿ ಲೋಕಪ್ರಜ್ಞೆ, ಸಮಯ ಪ್ರಜ್ಞೆ ಹಾಗೂ ಸ್ಥಿತಪ್ರಜ್ಞೆಯನ್ನು ಬೆಳೆಸುತ್ತವೆ ಎಂದರು.
ಚಿತ್ರಕಲಾ ಶಿಕ್ಷಕ ಪ್ರಸನ್ನಕುಮಾರ್ ಮಾತನಾಡಿ, ಶಿಕ್ಷಣದೊಂದಿಗೆ ಆದರ್ಶ ಗುಣಗಳು ಬಾರದಿದ್ದರೆ ಓದುವುದು ವ್ಯರ್ಥ. ಮಾರ್ಗದರ್ಶಕರ ನೆರವಿನಿಂದ ಚಿತ್ರ ಬಿಡಿಸಿ ಉತ್ತಮ ಅಂಕ ಪಡೆದರೆ ಸಾಲದು. ಸ್ವರಚನೆ ಎಂಬುದು ಅತೀ ಮುಖ್ಯ ಎಂದರು.
ಮನಸಿದ್ದರೆ ಮಾರ್ಗ ಎಂಬಂತೆ ಮನಸಿಟ್ಟು ತಮ್ಮದೇ ಕಲ್ಪನೆಯಲ್ಲಿ ಚಿತ್ರಗಳನ್ನು ರಚಿಸಬೇಕು. ಅಲ್ಲದೆ, ಮಕ್ಕಳು ಎಳೆ ವಯಸ್ಸಿನಿಂದಲೇ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಇದು ಜೀವನಕ್ಕೂ ಸಹಕಾರಿಯಾಗಲಿದೆ. ಪೋಷಕರು ಮಕ್ಕಳಿಗೆ ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಜೀವನದ ಪಾಠವನ್ನೂ ಹೇಳಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಏ. 15ರಂದು ವಿಶ್ವ ಕಲಾ ದಿನ ಆಚರಿಸಲಾಗುತ್ತಿದ್ದು, ಅಂದು ಮಡಿಕೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಹಿರಿಯ ಕಲಾವಿದರು ಆಗಮಿಸಿ ಪ್ರದರ್ಶನಗಳನ್ನು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಭಾರತೀಯ ವಿದ್ಯಾಭವನದ ಕಾರ್ಯದರ್ಶಿ ಸೋಮಣ್ಣ, ಕಲಾಭಾರತಿ ಸಂಸ್ಥೆಯ ವಿದ್ಯಾರ್ಥಿಗಳು, ಪಾಲಕರು ಇದ್ದರು.