ವಿದ್ಯಾದಾನ ಸಂಸ್ಥೆ ಸೇವೆ ಶ್ಲಾಘನೀಯ

9 GDG 3
Published on

ಗದಗ: ಉತ್ತರ ಕರ್ನಾಟಕದ ಭಾಗದಲ್ಲಿ 100 ವರ್ಷಗಳನ್ನು ಪೂರೈಸಿದ ನಗರದ ವಿದ್ಯಾದಾನ ಸಮಿತಿ ಹಲವಾರು ರಾಜಕಾರಣಿಗಳು, ಕ್ರೀಡಾಪಟುಗಳು ಹಾಗೂ ವಿವಿಧ ಸ್ತರಗಳಲ್ಲಿ ಸಾಧನೆ ಮಾಡಿದ ಅನೇಕ ವ್ಯಕ್ತಿಗಳನ್ನು ನೀಡಿದೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.

ನಗರದ ವಿದ್ಯಾದಾನ ಸಮಿತಿಯ ಸುವರ್ಣ ಮಹೋತ್ಸವದ ವರ್ಷಾಚರಣೆಯ ಪ್ರಯುಕ್ತ ಸಂಸ್ಥೆಯ 100 ವರ್ಷಗಳ ಸಾಧನೆ ಹಾಗೂ ವಿವರಗಳನ್ನು ಹೊಂದಿದ ವೆಬ್​ಸೈಟ್ ಅನ್ನು ಹುಬ್ಬಳ್ಳಿಯ ಕಚೇರಿಯಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವಿದ್ಯಾದಾನ ಸಮಿತಿಯ ಗಂಡು ಮಕ್ಕಳ ಶಾಲೆಯಲ್ಲಿ ಕಲಿತದ್ದು ನನಗೆ ಹೆಮ್ಮೆಯ ವಿಷಯ. ಆ ದಿನಗಳನ್ನು ನಾನು ಎಂದೂ ಮರೆಯಲಾರೆ ಎಂದರು.

ನಾಡಕವಿ ಹುಯಿಲಗೋಳ ನಾರಾಯಣರಾಯರು ಸ್ಥಾಪನೆ ಮಾಡಿದ ವಿದ್ಯಾದಾನ ಸಮಿತಿ ಕಳೆದ 100 ವರ್ಷಗಳಿಂದ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತ ಬಂದಿದೆ. ಇಂತಹ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಅಧ್ಯಕ್ಷ ಡಿ.ಬಿ. ಹುಯಿಲಗೋಳ, ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರು ಅಭಿನಂದನಾರ್ಹರು. ಮುಂಬರುವ ದಿನಮಾನಗಳಲ್ಲಿ ಸಂಸ್ಥೆಯು ಸುಸಜ್ಜಿತ ಕಟ್ಟಡವನ್ನು ಹೊಂದಿ, ಮಾದರಿ ಸಂಸ್ಥೆಯಾಗಿ ಬೆಳೆಯಬೇಕು. ಶತಮಾನ ಕಂಡ ಈ ಸಂಸ್ಥೆಯ ವೆಬ್​ಸೈಟ್ ಉದ್ಘಾಟನೆ ಮಾಡುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದರು.

ವಿದ್ಯಾದಾನ ಸಮಿತಿ ಅಧ್ಯಕ್ಷ ಡಿ.ಬಿ. ಹುಯಿಲಗೋಳ ಮಾತನಾಡಿ, ಸಂಸ್ಥೆಯ ಸುವರ್ಣ ಮಹೋತ್ಸವದ ವರ್ಷಾಚರಣೆಯಲ್ಲಿ ವರ್ಷದುದ್ದಕ್ಕೂ ಹಲವಾರು ವಿದಾಯಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ವಿದ್ಯಾದಾನ ಸಮಿತಿ ಕುರಿತ ಮಾಹಿತಿಯನ್ನು ವೆಬ್​ಸೈಟ್ www.vidyadansamiti.com ಮೂಲಕ ಪಡೆಯಬಹುದು ಎಂದು ಉಪನ್ಯಾಸಕ ಕಿಶೋರಬಾಬು ನಾಗರಕಟ್ಟಿ ತಿಳಿಸಿದರು.

ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಸದಸ್ಯರಾದ ಡಾ. ಪವನ ಎಸ್. ಹುಯಿಲಗೋಳ, ಪ್ರತೀಕ ಎಸ್. ಹುಯಿಲಗೋಳ, ವಿನಾಯಕ ಮುಕ್ತಾಳ ಹಾಗೂ ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net