

ತಹಸೀಲ್ದಾರ್ ಮೇಘರಾಜ ನಾಯ್ಕ ಅಧ್ಯಕ್ಷತೆಯಲ್ಲಿ ವಿವಿಧ ರೆಸಾರ್ಟ್, ಲಾಜಿಂಗ್ ಮತ್ತು ವಸತಿ ವ್ಯವಸ್ಥೆ ಹೊಂದಿರುವವರ ಸಭೆ ಶುಕ್ರವಾರ ನಡೆಯಿತು.
ವಿದೇಶಿಯರಿಗೆ ವಸತಿ ಒದಗಿಸಿದವರು ಮಾತ್ರ ಪಾಲ್ಗೊಂಡ ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಮೇಘರಾಜ ನಾಯ್ಕ ಗೋಕರ್ಣದ ನಾನಾ ಕಡೆಗಳಲ್ಲಿ ಒಟ್ಟು 350 ವಿದೇಶಿ ಪ್ರವಾಸಿಗರು ವಾಸವಾಗಿದ್ದಾರೆ. ಇವರಲ್ಲಿ ಕೆಲವರು ತಮ್ಮ ದೇಶಗಳಿಗೆ ಮರಳಲು ಕಷ್ಟಕರವಾಗಿದೆ. ಇನ್ನು ಕೆಲವರಿಗೆ ದೇಶದಿಂದ ಹಣ ತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇವರೆಲ್ಲರೂ ನಮ್ಮ ದೇಶದ ಅತಿಥಿಗಳಾಗಿರುವುದರಿಂದ ಇವರನ್ನು ಉಳಿಸಿಕೊಂಡವರು ಕರೊನಾ ಆತಂಕದ ಈ ದಿನಗಳಲ್ಲಿ ಅವರನ್ನು ಹೊರ ಹಾಕಬಾರದು. ಅವರಿಗೆ ಅಗತ್ಯವಿರುವ ಊಟೋಪಚಾರದ ಏರ್ಪಾಟನ್ನು ಉಳಿಸಿಕೊಂಡವರು ಕಡ್ಡಾಯವಾಗಿ ನೋಡಿಕೊಳ್ಳಬೇಕು. ವಿದೇಶಿಯರನ್ನು ಹೊರಗೆ ಅಡ್ಡಾಡಲು ಬಿಡುವುದರಿಂದ ಲಾಕ್ಡೌನ್ಗೆ ಭಂಗ ಬರುತ್ತಿರುವುದರಿಂದ ಅವರಿಗೆ ಬೇಕಾದ ಸಾಮಾನುಗಳನ್ನು ವಸತಿ ಕಲ್ಪಿಸಿದವರೇ ತಂದು ಕೊಡಬೇಕು. ಲಾಕ್ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದ್ದು ಕಾರಣ ಇದನ್ನು ವಿದೇಶಿಯರಿಗೆ ತಿಳಿ ಹೇಳಬೇಕು ಎಂದು ಹೇಳಿದರು.
ಊಟೋಪಚಾರ ಮಾಡಿಕೊಳ್ಳಲಾಗದ ನಿರ್ಗತಿಕರು ಯಾರಾದರೂ ಗೋಕರ್ಣದಲ್ಲಿದ್ದರೆ ಅವರನ್ನು ಗುರುತಿಸಿ ತಾಲೂಕಾಡಳಿತಕ್ಕೆ ತಿಳಿಸ ಬೇಕು.ಇಂತವರಿಗೆ ಕುಮಟಾದಲ್ಲಿ ಈಗಾಗಲೆ ಊಟ, ಉಪಾಹಾರದ ಏರ್ಪಾಟು ಮಾಡಲಾಗಿದ್ದು ಅಂತವರಿಗೆ ಗೋಕರ್ಣದಲ್ಲೂ ಸರ್ಕಾರದ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಸಿಪಿಐ ಪರಮೇಶ್ವರ ಗುನಗ ಮಾತನಾಡಿ ಕೆಲವು ವಿದೇಶಿಯರು ಬಾಡಿಗೆ ಬೈಕ್ ಮೇಲೆ ಓಡಾಡುತ್ತಿರುವ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಬೈಕ್ ಒದಗಿಸಿದವರ ವಿರುದ್ಧ ಪ್ರಕರಣ ದಾಖಲಿಸುವ ಜೊತೆಗೆ ಬೈಕ್ಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಂಚಾಯಿತಿ ಅಧ್ಯಕ್ಷೆ ಮಹಾಲಕ್ಷ್ಮಿ ಭಡ್ತಿ, ಉಪಾಧ್ಯಕ್ಷ ಶೇಖರ ನಾಯ್ಕ ವೇದಿಕೆಯಲ್ಲಿದ್ದರು. ಟಾಸ್ಕ್ಫೋರ್ಸ್ ನೋಡಲ್ ಅಧಿಕಾರಿ ನರೇಶ ಜಿ.ವಿ., ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಪಿಎಸ್ಐ ನವೀನ ನಾಯ್ಕ, ತಾಪಂ ಸದಸ್ಯ ಮಹೇಶ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಕೃಷ್ಣ ನಾಯ್ಕ ಇತರರಿದ್ದರು.
EndFragment