ವಿದೇಶಿ ಸಂಸ್ಕೃತಿ ವ್ಯಾಮೋಹಕ್ಕೆ ಯುವಜನತೆ ಬಲಿ

ಚನ್ನರಾಯಪಟ್ಟಣದಲ್ಲಿರುವ ಕೊಳದ ಆಂಜನೇಯಸ್ವಾಮಿ ದೇವಾಲಯದಲ್ಲಿನ ಕೊಳಕ್ಕೆ ರಾಜ್ಯ ಹಿಂದು ದೇವಾಲಯಗಳ ಅರ್ಚಕರ ಮತ್ತು ಪುರೋಹಿತರ ಒಕ್ಕೂಟವು ಅಯೋಜಿಸಿದ್ದ ಗಂಗಾರತಿ ಕಾರ್ಯಕ್ರಮದ ಸಲುವಾಗಿ ಧಾರ್ಮಿಕ ವಿಧಿ-ವಿಧಾನಗಳನ್ನು ಭಾನುವಾರ ನಡೆಸಲಾಯಿತು.
ಫೋಟೋ ಶೀರ್ಷಿಕೆ 14 ಸಿಆರ್_ಪಿ-1ಎ
Published on

ಚನ್ನರಾಯಪಟ್ಟಣ: ಭಗವಂತ ನಿರ್ಮಾಣ ಮಾಡಿದ ದೇಶದಲ್ಲಿ ಹಿಂದು ಸಂಪ್ರದಾಯದ ಆಚರಣೆಗಳಾಗಬೇಕು. ಆದನ್ನು ಬದಿಗಿಟ್ಟು ಇಂದಿನ ಯುವಜನತೆ ವಿದೇಶಿ ಸಂಸ್ಕೃತಿ ವ್ಯಾಮೋಹಕ್ಕೆ ಬಲಿಯಾಗಿ ಆದರ ಅನುಕರಣೆಯಲ್ಲಿ ಮುಳುಗಿದ್ದಾರೆ ಎಂದು ಹಿಂದು ದೇವಾಲಯಗಳ ಅರ್ಚಕರ ಮತ್ತು ಪುರೋಹಿತರ ಒಕ್ಕೂಟದ ರಾಜಾಧ್ಯಕ್ಷ ಡಾ.ಎಂ.ಎಸ್.ವಿಶ್ವನಾಥ್ ದೀಕ್ಷಿತ್ ಕಳವಳ ವ್ಯಕ್ತಪಡಿಸಿದರು.


ಪಟ್ಟಣದಲ್ಲಿನ ಕೊಳದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಕೊಳದಲ್ಲಿ ಭಾನುವಾರ ರಾಜ್ಯ ಹಿಂದು ದೇವಾಲಯಗಳ ಅರ್ಚಕರ ಮತ್ತು ಪುರೋಹಿತರ ಒಕ್ಕೂಟವು ಆಯೋಜಿಸಿದ್ದ ಗಂಗಾರತಿ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿ ಮಾತನಾಡಿದ ಅವರು, ದೇವ ನಿರ್ಮಿತ ಭಾರತ ದೇಶವು ಹಿಂದು ಭೂಮಿ, ದೇವಾಲಯಗಳ ಭೂಮಿ ಎಂಬ ಪ್ರತೀತಿ ಹೊಂದಿದೆ. ಸಾವಿರಾರು ವರ್ಷಗಳಿಂದ ಹಿಂದು ರಾಷ್ಟ್ರವಾಗಿರುವ ಭಾರತದಲ್ಲೀಗ ಆಚರಣೆ ಶೈಲಿ, ವಸ್ತ್ರವಿನ್ಯಾಸ, ಸಂಸ್ಕೃತಿಗಳೆಲ್ಲವೂ ಬದಲಾಗಿ ಜನರ ಮನಸ್ಥಿತಿಯೂ ಬದಲಾಗಿದೆ ಎಂದರು.


ನಮ್ಮ ಪೂರ್ವಿಕರ ಪ್ರತಿ ಮನೆಯಲ್ಲಿ ಕಥೆಗಳನ್ನು ಹೇಳುವ ಮೂಲಕ ಕಟ್ಟುತ್ತಿದ್ದ ಜೀವನವೀಗ, ವ್ಯಥೆಯಾಗಿದೆ. ನಮ್ಮ ಸನಾತನ ಧರ್ಮ ಪ್ರತಿಸ್ಥಾಪಿಸುವ ಮೂಲಕ ಹಿಂದುಗಳಲ್ಲಿ ನಾನೊಬ್ಬ ಹಿಂದು ಎಂಬುದನ್ನು ಜಾಗೃತಿ ಮೂಡಿಸುವ ಸಲುವಾಗಿ ತಾಲೂಕಿನಲ್ಲಿ ಸ್ಥಾಪಿತಗೊಂಡ ಹಿಂದು ದೇವಾಲಯಗಳ ಆರ್ಚಕರ ಒಕ್ಕೂಟದಿಂದ ಗಂಗಾಪೂಜೆ ನಡೆಸಲಾಗುತ್ತಿದೆ. ಗಂಗಾರತಿ, ಗಂಗೆಪೂಜೆಯ ಮಹತ್ವವನ್ನು ತಿಳಿಸುವ ಕೆಲಸಕ್ಕೆ ಮುನ್ನುಡಿ ಇಟ್ಟು, ಇದೀಗ ರಾಜ್ಯದ 12 ಜಿಲ್ಲೆಗಳಲ್ಲಿನ 76 ತಾಲೂಕುಗಳಲ್ಲಿ ಗಂಗಾರತಿ ನಡೆಸಲಾಗುತ್ತಿದೆ. ಈ ಮೂಲಕ ಅರ್ಚಕರ ಒಕ್ಕೂಟ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳಿಗಷ್ಟೇ ಸೀಮಿತವಾಗದೆ ಸಮಾಜದ ದಿಗ್ಧರ್ಶಕರಾಗುವ ಪ್ರಯತ್ನದಲ್ಲಿ ಇದ್ದೇವೆ ಎಂದರು.


ಸಂಸ್ಕೃತ ಪಂಡಿತ ಗೋಪಿನಾಥ್ ಶಾಸ್ತ್ರಿ ಮಾತನಾಡಿ, ವೇದ, ಉಪನಿಷತ್ತುಗಳ ದೇಶ ಭಾರತವೀಗ ಪಾಶ್ಚಾತ್ಯರ ಸೋಗಿಗೆ ಬಲಿಯಾಗಿ ಆದನ್ನು ಸಂಪೂರ್ಣವಾಗಿ ಕಲಿಯದೆ, ಅಳವಡಿಸಿಕೊಳ್ಳದೆ ಅತಂತ್ರಿಗಳಾಗಿದ್ದೇವೆ. ಬ್ರಿಟಿಷರ ಆಳ್ವಿಕೆಯಲ್ಲಿ ನಮ್ಮ ಸ್ವಂತಿಕೆಗಳಿಗೆ ಕೊಡಲಿ ಪೆಟ್ಟು ಬಿದಿದ್ದೆ. ಆದಾಗ್ಯೂ ಅತಿ ಶ್ರೀಮಂತವಾಗಿರುವ ನಮ್ಮ ಸಂಸ್ಕೃತ, ವೇದ, ಉಪನಿಷತ್ತುಗಳನ್ನು ಕೆಲ ಪಾಶ್ಚಿಮಾತ್ಯ ದೇಶಗಳು ಅಳವಡಿಸಿಕೊಳ್ಳುವ ಮೂಲಕ ಸುಸಂಸ್ಕೃತರಾಗಲು ಹೊರಟರೆ ನಮ್ಮ ದೇಶ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುವತ್ತ ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು.


ರಾಜ್ಯ ಹಿಂದೂ ದೇವಾಲಯಗಳ ಅರ್ಚಕರ ಮತ್ತು ಪುರೋಹಿತರ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಎನ್.ಪಾಂಡುರಂಗ, ತಾಲೂಕು ಆಧ್ಯಕ್ಷ ಶ್ರೀನಿವಾಸ್, ಮುಜರಾಯಿ ದೇವಾಲಯಗಳ ಸಂಘದ ತಾಲೂಕು ಅಧ್ಯಕ್ಷ ಶ್ರೀಧರ್‌ಮೂರ್ತಿ, ಲೆಕ್ಕಪರಿಶೋಧಕ ಕಿರಣ್‌ಕುಮಾರ್, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಜಿ.ಆರ್.ಮೋಹನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net