

ಭಾರತದ ವಿದೇಶಾಂಗ ನೀತಿ ಅಭಿವೃದ್ಧಿ ಕೇಂದ್ರಿತ ಮತ್ತು ಜನಕೇಂದ್ರಿತವಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದರು.
ನಗರದ ಚಿಂತಕರ ವೇದಿಕೆ ವತಿಯಿಂದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ‘ಮೋದಿ ಸರ್ಕಾರದ ವಿದೇಶಾಂಗ ನೀತಿಗಳು’ ಕುರಿತು ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಭಾರತ ವಿಶಿಷ್ಟ ಮತ್ತು ವಿಭಿನ್ನ ದೇಶವಾಗಿ ಹೊರಹೊಮ್ಮಿದೆ. ದೇಶದಲ್ಲಿ ಉತ್ಪಾದನೆ ಮಾಡಿದ ಕೋವಿಡ್ ಲಸಿಕೆಯನ್ನು ಪೂರೈಸುವ ಮೂಲಕ ವಿವಿಧ ರಾಷ್ಟ್ರಗಳ ಜತೆಗೆ ಮಾಡಿಕೊಂಡ ಲಸಿಕೆ ಮೈತ್ರಿ ಭಾರತಕ್ಕೆ ಧನಾತ್ಮಕ ಶಕ್ತಿ ಆಗಿದೆ. ಇದು ವಿವಿಧ ದೇಶದೊಂದಿಗೆ ಭಾರತ ಹೊಂದಿರುವ ದೊಡ್ಡ ಪ್ರಯೋಜನಕಾರಿ ಸಂಬಂಧವಾಗಿದೆ ಎಂದರು.
ಭಾರತ ನಮ್ಮ ಆಸಕ್ತಿ ಮತ್ತು ಅಗತ್ಯ ಮಾತ್ರ ಸುಭದ್ರಗೊಳಿಸಿಕೊಂಡಿಲ್ಲ. ಜಗತ್ತಿಗೆ ಬೇಡಿಕೆಗಳನ್ನೂ ಪೂರೈಸುವ ಮೂಲಕ ಧೈರ್ಯ ತುಂಬಿದ್ದೇವೆ. ಭಾರತ ಅನೇಕ ವಿಷಯಗಳಲ್ಲಿ ಸಮರ್ಥವಾಗಿದೆ. ಇದಕ್ಕೆ ಪ್ರೇರಣೆ, ನಾಯಕತ್ವ, ಬೆಂಬಲ ನೀಡುವ ಇಚ್ಛೆ ಮತ್ತು ನಮಗಾಗಿ ಯೋಚಿಸುವ ಸಾಮರ್ಥ್ಯ ಬೇಕು. ಈ ಸಂಗತಿಗಳನ್ನು ಭಾರತದ ವಿದೇಶಾಂಗ ನೀತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು.
ಭಾರತೀಯರು ವಿದೇಶದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಿದರೆ, ಸರ್ಕಾರ ಅವರಿಗೆ ಸಹಾಯ ಮಾಡಲು ಸಿದ್ಧವಾಗಿದೆ ಎಂದು ಹೇಳಿದರು.
ಯುದ್ಧಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ನಡೆಸಿದ ‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದರು.