

ಶಿಕಾರಿಪುರ: ಯೋಗದಿಂದ ದೇಹಶುದ್ಧಿ, ಆತ್ಮಶುದ್ಧಿ, ಭಾವ ಶುದ್ಧಿಯಾಗುವ ಜತೆ ಸಂಕಲ್ಪ ಸಿದ್ಧಿಯಾಗುತ್ತದೆ. ಯೋಗ ಮತ್ತು ಧ್ಯಾನ ಮನಸ್ಸಿನ ಕಲ್ಮಷಗಳನ್ನು ತೆಗೆದುಹಾಕುತ್ತವೆ ಎಂದು ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ 11ನೇ ವಿಶ್ವ ಯೋಗ ದಿನಾಚರಣೆ ಸಾನ್ನಿಧ್ಯ ವಹಿಸಿ ಯೋಗದ ಪ್ರಾತ್ಯಕ್ಷಿಕೆಯೊಂದಿಗೆ ಆಶೀರ್ವಚನ ನೀಡಿದ ಅವರು, ಯೋಗವು ಸದ್ವಿಚಾರಗಳೊಂದಿಗೆ ಆರೋಗ್ಯಕರ ದೇಹ ಮತ್ತು ಮನಸ್ಸನ್ನು ನಿರ್ಮಾಣ ಮಾಡುತ್ತದೆ. ಭಾರತದ ಯೋಗವಿದ್ಯೆ ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ. ಆದರೆ ಸರ್ವೋಪಯೋಗಿಯಾದ ವಿದ್ಯೆಯನ್ನು ದೂರ ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು. ಯೋಗವು ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ನೀಡಿದ ಉಡುಗೊರೆಯಾಗಿದೆ. ಯೋಗವು ಒತ್ತಡ, ಆತಂಕ ಮತ್ತು ಖಿನ್ನತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕಾಗ್ರತೆ ಮತ್ತು ಸ್ಮರಣಾಶಕ್ತಿ ಹೆಚ್ಚಿಸುತ್ತದೆ. ದೇಹ ಬಲಪಡಿಸುವುದರ ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಒಂದು ಗಂಟೆ ಯೋಗ ಮಾಡುವುದರಿಂದ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ.ಆಹಾರದಲ್ಲಿ ಎಣ್ಣೆಯುಕ್ತ ಪದಾರ್ಥ ತ್ಯಜಿಸಬೇಕು ಎಂದರು. ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್.ಶಿವಕುಮಾರ, ಸಂಸ್ಥೆ ಆಡಳಿತ ಸಮನ್ವಯ ಅಕಾರಿ ಕುಬೇರಪ್ಪ, ಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಪ್ರಾಚಾರ್ಯರಾದ ವಿಶ್ವನಾಥ, ವಿದ್ಯಾಶಂಕರ, ವೀರೇಂದ್ರ, ರವೀಂದ್ರ, ಸಿದ್ದೇಶ್ವರ, ಪ್ರಶಾಂತ್, ಪ್ರಶಾಂತ ಕುಬಸದ ಮತ್ತಿತರರಿದ್ದರು.
ಯೋಗವು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೀವನದ ಗುಣಮಟ್ಟ ಸುಧಾರಿಸಲು ಸಹಾಯ ಮಾಡುವ ಶಕ್ತಿಯುತ ಸಾಧನ. ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವುದು ಉತ್ತಮ. ಶ್ರೀ ಮಹಾಂತ ಸ್ವಾಮೀಜಿ ಜಡೆ ಮಠ