

ಪಾಂಡವಪುರ : ಬದುಕು ಕಟ್ಟಿಕೊಳ್ಳುವ ಸಲುವಾಗಿ ವಿದೇಶಕ್ಕೆ ಹೋಗಿದ್ದೇ ಹೊರತು ಎಲ್ಲಿಗೂ ಕದ್ದು ಹೋಗಿರಲಿಲ್ಲ. ಅಪಪ್ರಚಾರ ಮಾಡುವವರು ಇದನ್ನು ತಿಳಿದುಕೊಳ್ಳಬೇಕು. ನನಗೂ ಮನಸಾಕ್ಷಿ ಇದೆ ಎಂದು ಕಾಂಗ್ರೆಸ್-ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಶಾಸಕ ಸಿ.ಎಸ್.ಪುಟ್ಟರಾಜು ಆರೋಪಕ್ಕೆ ತಿರುಗೇಟು ನೀಡಿದರು.
ಶನಿವಾರ ಬೆಳಗ್ಗೆ 11.10ಕ್ಕೆ ಚುನಾವಣಾಧಿಕಾರಿಗಳಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ತಂದೆಯ ನಿಧನದ ಬಳಿಕ ಆಕಸ್ಮಿಕವಾಗಿ ಚುನಾವಣೆ ಎದುರಿಸಿದ್ದೆ. ನಂತರದಲ್ಲಿ ನನ್ನ ಬದುಕಿನ ಜತೆಗೆ ಸಾವಿರಾರು ಉದ್ಯೋಗಿಗಳ ಬದುಕಿಗೂ ದಾರಿ ತೋರಿಸಬೇಕಾದ ಅನಿವಾರ್ಯತೆ ಇದ್ದ ಕಾರಣ ಎಲ್ಲವನ್ನು ನಿಭಾಯಿಸಿ ಆ ನೆಲದ ಕಾನೂನಿನಂತೆ ಕಂಪನಿ ಮಾರಾಟ ಮಾಡಿ ಇಲ್ಲಿಗೆ ಬರುವುದು ಸ್ವಲ್ಪ ತಡವಾಯಿತು. ಇದನ್ನೇ ವಿರೋಧಿಗಳು ಬಂಡವಾಳ ಮಾಡಿಕೊಂಡು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಜಾಲತಾಣದಲ್ಲಿ ನನ್ನ ಕಂಪನಿ ಬಗ್ಗೆ ಹುಡುಕಾಟ ನಡೆಸಿದರೆ ವಿರೋಧಿಗಳ ಆರೋಪಗಳಿಗೆ ಉತ್ತರ ಸಿಗುತ್ತದೆ. ನನ್ನ ಬದುಕಿನ ಎಲ್ಲ ವಿಚಾರಗಳನ್ನು ಜನರ ಮುಂದೆ ಪಾರದರ್ಶಕವಾಗಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ತಂದೆಯಂತೆ ರೈತ ಹೋರಾಟದ ಹಾದಿಯಲ್ಲಿ ಸಾಗಲು ವಿದೇಶದ ವ್ಯವಹಾರಗಳನ್ನು ಕಡಿದುಕೊಂಡು ಇಲ್ಲಿಗೆ ಬಂದಿದ್ದೇನೆ. ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಈ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತವಾಗಿದೆ. ಕ್ಷೇತ್ರದ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಲಾಗಿದೆ. ಎಲ್ಲರ ಸಹಕಾರದಿಂದ ಈ ಚುನಾವಣೆಯಲ್ಲಿ ಗೆಲುವು ಸುಲಭವಾಗಲಿದೆ ಎಂದರು.
ನಮ್ಮ ತಾಯಿ ಸುನೀತಾ ಪುಟ್ಟಣ್ಣಯ್ಯ ಅವರು ಏ.13 ರಂದು ನಾಮಪತ್ರ ಸಲ್ಲಿಸಿದ್ದಾರೆ. ನಾನು ಇಂದು ಸಾಕೇತಿಕವಾಗಿ ನಾಮಪತ್ರ ಸಲ್ಲಿಸಲಾಗಿದ್ದು, ಏ.20 ರಂದು ಕಾಂಗ್ರೆಸ್-ರೈತಸಂಘ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಾಗುವುದು. ಅಂದು ಕ್ಷೇತ್ರದ ಸಾವಿರಾರು ಸಂಖ್ಯೆ ಜನರು ಭಾಗವಹಿಸಲಿದ್ದಾರೆ ಎಂದರು. ಕಾಂಗ್ರೆಸ್ ಮುಖಂಡ ಚಿಕ್ಕಾಡೆ ಕೃಷ್ಣೇಗೌಡ ದರ್ಶನ್ ಪುಟ್ಟಣ್ಣಯ್ಯ ಅವರ ಠೇವಣಿ ಹಣವನ್ನು ಪಾವತಿಸಿ ಗೆಲುವಿಗೆ ಶುಭ ಹಾರೈಸಿದರು.
ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ವಕೀಲ ರವಿಕುಮಾರ್, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಕಾರ್ಯದರ್ಶಿ ವಿಜಯಕುಮಾರ್, ರೈತಸಂಘ ಮುಖಂಡರಾದ ಹರವು ಪ್ರಕಾಶ್, ಎಲೆಕೆರೆ ಚಂದ್ರು, ರಾಘವೇಂದ್ರ, ಕ್ಯಾತನಹಳ್ಳಿ ಎಸ್.ದಯಾನಂದ್, ಕಾಂಗ್ರೆಸ್ ಮುಖಂಡರಾದ ಸಿ.ಆರ್.ರಮೇಶ್, ಎಂ.ಮುರುಳೀಧರ್ ಇತರರು ಇದ್ದರು.