ವಿದುಷಿ ಲಲಿತ್ ಜೆ.ರಾವ್‌ಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ

47
Published on

ಮೈಸೂರು: ಸಂಗೀತ ಕ್ಷೇತ್ರದ ಕಲಾವಿದರಿಗೆ ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ಪುರಸ್ಕಾರವಾದ 2022-23ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಯನ್ನು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಕಲಾವಿದೆ, 80 ವರ್ಷ ಇಳಿವಯಸ್ಸಿನ ವಿದುಷಿ ಲಲಿತ್ ಜೆ.ರಾವ್ ಅವರಿಗೆ ಪ್ರದಾನ ಮಾಡಲಾಯಿತು.

ಅರಮನೆಯ ವೇದಿಕೆಯಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಇವರಿಗೆ ಮೈಸೂರು ಪೇಟ ತೊಡಿಸಿ, ಪ್ರಶಸ್ತಿ ಫಲಕ, 5 ಲಕ್ಷ ರೂ. ನಗದು ಬಹುಮಾನ, ಸ್ಮರಣಿಕೆ ಮತ್ತು ಸರಸ್ವತಿ ಪ್ರತಿಮೆಯನ್ನು ನೀಡಿ ಸತ್ಕರಿಸಲಾಯಿತು.


ತಲೆಎತ್ತಿದೆ ನಕ್ಸಲವಾದ:
ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಡೆ ಕಾಗೇರಿ ಮಾತನಾಡಿ, ಸಮಾಜದಲ್ಲಿ ನಕ್ಸಲವಾದ, ಉಗ್ರವಾದ ತಲೆಎತ್ತುತ್ತಿದೆ. ಈ ಕುರಿತು ಯುವ ಜನರು ಜಾಗೃತವಾಗಬೇಕು ಎಂದರು.
ಪಾಕಿಸ್ತಾನ ಸೇರಿದಂತೆ ಇನ್ನಿತರ ನೆರೆದೇಶಗಳಲ್ಲಿರುವ ದುಷ್ಟಶಕ್ತಿ ಕುರಿತು ಸೈನಿಕರು ನೋಡಿಕೊಳ್ಳುತ್ತಾರೆ. ಆದರೆ, ನಮ್ಮ ಮಧ್ಯೆಯೇ ಅನೇಕ ದುಷ್ಟಶಕ್ತಿಗಳು ಇವೆ. ಅದು ಹಿಂದುಗಳ ನಂಬಿಕೆಯಾದ ಪವಿತ್ರ ಶ್ರೀರಾಮ, ಗೋವು ಇನ್ನಿತರ ನಮ್ಮ ಸಂಸ್ಕೃತಿ, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿದೆ. ಅದನ್ನು ಸದೆಬಡಿಯುವ ಕೆಲಸವಾಗಬೇಕು ಎಂದು ಕರೆಕೊಟ್ಟರು.


ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗವೂ ಮೌಲ್ಯ ಕಳೆದುಕೊಂಡಿದೆ. ಈ ವಿಷವರ್ತುಲದಿಂದ ಹೊರ ಬಂದು ಇದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕಿದೆ. ಅದಕ್ಕಾಗಿ ಆದರ್ಶಯುತ ಸಮಾಜ ನಿರ್ಮಾಣದ ಕಡೆಗೆ ನಾವುಗಳು ಕಾರ್ಯೋನ್ಮುಖವಾಗಬೇಕಿದೆ ಎಂದರು.


ಜಾನಪದ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಮೂಲಕ ಮುಂದಿನ ಪೀಳಿಗೆ ಹಸ್ತಾಂತರಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.
ದೇಶದ ಪ್ರತಿ ಮನೆ ಮನಗಳ ಮೇಲೆಯೂ ಪಾಶ್ಚಿಮಾತ್ಯ ಸಂಸ್ಕೃತಿ ಆಕ್ರಮಣ ಹೆಚ್ಚಾಗಿದೆ. ವೇಷಭೂಷಣ, ಆಹಾರ ಇನ್ನಿತರ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಕುರಿತು ಅರಿತುಕೊಂಡು ಪರಕೀಯ ಸಂಸ್ಕೃತಿಯಿಂದ ದೂರ ಇರಬೇಕಿದೆ ಎಂದರು.
ವಿಧಾನಪರಿಷತ್‌ನ ಸಭಾಪತಿ ರಘುನಾಥ್‌ರಾವ್ ಮಲ್ಕಾಪುರೆ, ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್ ಇನ್ನಿತರರು ಪಾಲ್ಗೊಂಡಿದ್ದರು.

ಹಿರಿಯ ಹಿನ್ನೆಲೆ ಗಾಯಕಿ ಎಚ್.ಆರ್.ಲೀಲಾವತಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಸಭಿಕರನ್ನು ರಂಜಿಸಿತು. ನೃತ್ಯರೂಪಕ, ನಾದಸ್ವಾರ, ವೀರಭದ್ರಕುಣಿತ ನಡೆಯಿತು

ಲಲಿತ್ ಜೆ.ರಾವ್ ಪರಿಚಯ:
ಇವರು ಹಿಂದುಸ್ತಾನಿ ಸಂಗೀತದ ಮೇರು ಕಲಾವಿದರು. ಇವರು 1942ರ ನವೆಂಬರ್ 6ರಂದು ಜನಿಸಿದ್ದು, ದೇಶದ ಪ್ರತಿಷ್ಠಿತ ಭಾರತೀಯ ವಿಜ್ಞ್ಞಾನ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದರು. ಆಕಾಶವಾಣಿ, ದೂರದರ್ಶನದ ಉನ್ನತ ಶ್ರೇಣಿಯ ಕಲಾವಿದರು ಎನಿಸಿರುವ ಇವರು ಆಗ್ರಾ-ಅತ್ರ್‌ಲಿ ಘರಾನಾದಲ್ಲಿ ಪ್ರಸಿದ್ಧರು. ಇವರು ದೇಶ-ವಿದೇಶದಲ್ಲಿ ಅನೇಕ ಸಂಗೀತ ಕಛೇರಿ ನೀಡಿದ್ದಾರೆ.
ಸಿಯಾಟೆಲ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯಕ್ಕೆ ಆಗ್ರಾ ಘರಾನಾದ ಸುಮಾರು 500 ಬಂಧಿಷ್‌ಗಳನ್ನು ಹಾಡಿ ಧ್ವನಿ ಮುದ್ರಿಸಿಕೊಟ್ಟಿದ್ದಾರೆ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಸರ್ವತೋಮುಖ ಬೆಳವಣಿಗೆ ಹಾಗೂ ಅದರ ಪಾವಿತ್ರೃತೆಗೆ ಸಾಂಪ್ರದಾಯಿಕ ಮೆರುಗನ್ನು ನೀಡಿದವರು. ಬಹಳ ಮುಖ್ಯವಾಗಿ ಕರ್ನಾಟಕದಲ್ಲಿ ಆಗ್ರಾ-ಅತ್ರ್‌ಲಿ ಘರಾನಾ ಪರಂಪರೆ ಭದ್ರವಾಗಿ ನೆಲೆಯೂರಲು ಕಾರಣರಾದವರು. ಇವರ ಕಲಾಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ… ಹೀಗೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net