ವಿಡಿಯೋ ಕ್ಲಿಪ್ಪಿಂಗ್ ಎಫ್​ಎಸ್​ಎಲ್​ಗೆ ಕಳುಹಿಸುತ್ತೇವೆ

horatti
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಎಂಎಲ್​ಸಿ ಸಿ.ಟಿ. ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದೊಳಗಿನ ದೃಶ್ಯಾವಳಿಗಳ ಯಾವುದೇ ವಿಡಿಯೋ ಕ್ಲಿಪ್ಪಿಂಗ್ ಸಿಕ್ಕಿಲ್ಲ. ಖಾಸಗಿಯಾಗಿ ಸಿಕ್ಕಿವೆ. ಅವುಗಳನ್ನು ನೀಡಿದರೆ ವಿಧಿವಿಜ್ಞಾನ ಪ್ರಯೋಗಾಲಯ (ಎಫ್​ಎಸ್​ಎಲ್)ಕ್ಕೆ ಕಳುಹಿಸಿ ಕೊಡುತ್ತೇವೆ. ಅಲ್ಲಿಂದ ವರದಿ ಬಂದ ಮೇಲೆ ಮುಂದೆ ವಿಚಾರ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸಭಾಪತಿ ಹೇಳಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಆಗುವಂತೆ ಎಂಎಲ್​ಸಿ ಸಿ.ಟಿ. ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಮಾಡಿದ್ದೇನೆ. ನಮ್ಮ ಮಾತಿಗೆ ಗೌರವ ಕೊಟ್ಟು ಬಂದರೆ ಇಲ್ಲಿಗೆ ಮುಗಿಸುತ್ತೇವೆ ಎಂದರು.

ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಈ ಪ್ರಕರಣದಲ್ಲಿ ಕಾನೂನು ಮತ್ತು ಸಂಸದೀಯ ಕಾನೂನು ಏನು ಹೇಳುತ್ತದೆ ಎಂಬುದನ್ನು ನೋಡುತ್ತಿದ್ದೇವೆ. ಸಿಐಡಿ ಪೊಲೀಸರು ಸ್ಥಳ ಮಹಜರು ಮಾಡಬಹುದು. ಅದಕ್ಕೆ ಅವಕಾಶ ನೀಡುವ ಬಗ್ಗೆ ಅಧಿಕಾರಿಗಳು ಹಾಗೂ ಮಾಜಿ ಸಭಾಪತಿಗಳೊಂದಿಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಹುಬ್ಬಳ್ಳಿ ಅಚ್ಚವ್ವನ ಕಾಲನಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಮೃತಪಟ್ಟ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಬಡವರು. ಅವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವೆ. ಈ ಘಟನೆಯಲ್ಲಿ ಇನ್ನು 6 ಜನರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಉಳಿಸಿಕೊಳ್ಳಲು ಕಿಮ್ಸ್ ವೈದ್ಯರು ಸಕಲ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net