

ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಉದ್ಘಾಟನಾ ಸಮಾರಂಭ ನಡೆಯಿತು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರವಿ. ಎಂ. ಹೆಬ್ಬಳ್ಳಿ, ಆಡಳಿತ ಅಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ರವರು ಸಸಿಗೆ ನೀರು ಉಣಿಸುವದರ ಮೂಲಕ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಪದಾಧಿಕಾರಿಗಳ ನಾಮಫಲಕವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ ರವರು ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ, ಇದರಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸ ಹೆಚ್ಚಾಗುತ್ತದೆ, ಮುಂದಿನ ಪೀಳಿಗೆಗೆ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಕೆಲಸ ಸ್ಕೌಟ್ಸ್ ಮತ್ತು ಗೈಡ್ಸನಿಂದಾಗಬೇಕು. ಮನುಷ್ಯನಿಗೆ ಸಂತೋಷ ಮತ್ತು ಆನಂದ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಸಿಗಲು ಸಾಧ್ಯ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರವಿ. ಎಂ. ಹೆಬ್ಬಳ್ಳಿ ರವರು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಿತ ರಾಜಕೀಯೇತರ ಶೈಕ್ಷಣಿಕ ಆಂದೋಲನವಾಗಿದೆ. 1907 ರಲ್ಲಿ ಸಂಸ್ಥಾಪಕ ಲಾರ್ಡ್ ಬಾಡೆನ್ ಪೋವೆಲ್ ರವರು ರೂಪಿಸಿದ ಉದ್ದೇಶಗಳು ಮತ್ತು ವಿಧಾನಗಳಿಗೆ ಅನುಗುಣವಾಗಿ ಜಾತಿ ಮತ್ತು ಧರ್ಮದ ತಾರತಮ್ಯವಿಲ್ಲದೆ ಎಲ್ಲರಿಗೂ ಮುಕ್ತವಾಗಿದೆ. ವಿವಿಧ ವಯೋಮಾನದವರ ಪ್ರಕಾರ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ಮತ್ತು ರೇಂಜರ್ ಗಳು ವಿಭಿನ್ನ ಧ್ಯೇಯ ವಾಕ್ಯವನ್ನು ಹೊಂದಿರುವ ವಿಭಾಗಗಳಿವೆ, ಆದರೆ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ದೈಹಿಕ, ಮಾನಸಿಕ, ಬೌಧ್ಧಿಕತೆಯನ್ನು ಸಾಧಿಸುವಲ್ಲಿ ಹಾಗೂ ಅವರ ಬೆಳವಣಿಗೆಗೆ ಕೊಡುಗೆ ನೀಡುವುದು ಘಟಕಗಳ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರಿಕರಾಗಿ ಮತ್ತು ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮುದಾಯಗಳ ಸದಸ್ಯರಾಗಿ, ಸಾಮಾಜಿಕ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಆಡಳಿತ ಅಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ರವರು ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಸಮುದಾಯದಲ್ಲಿ ಸಮಾಜ ಸೇವೆಗೆ ಒತ್ತು ನೀಡುತ್ತವೆ. ಅಷ್ಟೇ ಅಲ್ಲದೆ ಪ್ರಪಂಚವು ನೀಡುವ ಯಾವುದೇ ಜ್ಞಾನವನ್ನು ಘಟಕಗಳ ಪದಾಧಿಕಾರಿಗಳು ಪಡೆದುಕೊಳ್ಳಬಹುದಾಗಿದೆ. ಭರವಸೆ, ಕಾನೂನಿನಲ್ಲಿ ಅಂತರ್ಗತವಾಗಿರುವ ಮೌಲ್ಯಗಳಿಗೆ ಬದ್ಧತೆ, ಕೌಶಲ್ಯವನ್ನು ಅಭಿವೃದ್ಧಿಪಡಿಸುವುದು, ಸ್ವಾಭಿಮಾನವನ್ನು ಹೆಚ್ಚಿಸುವುದು, ಸ್ನೇಹಜೀವಿ, ಸಹಾಯ ಹಸ್ತ, ಶಿಸ್ತು ಮತ್ತು ನಡತೆ ಮುಂತಾದ ಸಾಮಾಜಿಕ ಮೌಲ್ಯಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳಿಂದ ಪಡೆಯಬಹುದಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆಯ ನಿರ್ದೇಶಕರಾದ ಡಾ. ಪವನ. ಎಸ್. ಹುಯಿಲಗೋಳ ರವರು ಈಗ ಪ್ರಚಲಿತ ದಿನಗಳಲ್ಲಿ ಡೆಂಗ್ಯೂ ಜ್ವರವು ವಿಪರೀತ ಕಂಡು ಬಂದಿದೆ, ಇಂತಹ ಸಂದರ್ಭಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳು ಸಮಾಜದ ಜನರಿಗೆ ಹಾಗೂ ತಮ್ಮ ಕುಟುಂಬದ ಸದಸ್ಯರಿಗೆ ಅದರ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮಾಜ ಸೇವೆಯನ್ನು ಮಾಡಬಹುದಾಗಿದೆ, ಅಷ್ಟೇ ಅಲ್ಲದೆ ಶಾಲೆಯ, ತಮ್ಮ ಮನೆಯ, ಓಣಿಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕೈಗೊಂಡು ಇಂತಹ ಮಹಾಮಾರಿ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದು ಪದಾಧಿಕಾರಿಗಳಿಗೆ ಕರೆ ನೀಡಿದರು. ಗೈಡ್ಸ್ ಘಟಕದ ಕ್ಯಾಪ್ಟನ್ ಶ್ರೀಮತಿ ಅರ್ಚನಾ ಗಿರಿತಿಮ್ಮಣ್ಣನವರ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಇತಿಹಾಸ ಮತ್ತು ಹಿನ್ನೆಲೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ವಿದ್ಯಾರ್ಥಿಗಳಿಗೆ ಹೇಗೆ ಅನುಕೂಲವಾಗಲಿದೆ ಎಂಬುದನ್ನು ಸಂಪೂರ್ಣ ಮಾಹಿತಿಯನ್ನು ಪದಾಧಿಕಾರಿಗಳಿಗೆ ತಿಳಿಸಿಕೊಟ್ಟರು.
ಶಾಲೆಯ ಶೈಕ್ಷಣಿಕ ಮಾರ್ಗದರ್ಶಿಕರಾದ ಪ್ರತೀಕ. ಎಸ್. ಹುಯಿಲಗೋಳ, ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ. ವಿ. ಹವಾಲ್ದಾರ, ಶಾಲೆಯ ಮುಖ್ಯೋಪಾಧ್ಯಾಯರಾದ ಎಂ. ಆರ್. ಡೊಳ್ಳಿನ ರವರು ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳಿಗೆ ಶುಭ ಹಾರೈಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಘಟಕದ ಕ್ಯಾಪ್ಟನ್ ಶ್ರೀ ವಿರೇಶ ಭಜಂತ್ರಿ ರವರು ಪದಾಧಿಕಾರಿಗಳಿಗೆ ಪಥಸಂಚಲನ ಮಾಡಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಗೀತೆಯನ್ನು ಹಾಡಿಸಿದರು.
ತನುಶ್ರೀ ಹಾದಿ ಹಾಗೂ ಸಂಗಡಿಗರು ಹಾಡಿದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶಿಕ್ಷಕಿಯರಾದ ಶ್ರೀಮತಿ ರೇಖಾ ಬಡಿಗೇರ ನಿರೂಪಿಸಿದರು, ಅಶ್ವಿನಿ ಜೋಶಿ ಸ್ವಾಗತಿಸಿದರು, ಪ್ರಭಾವತಿ ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಅತಿಥಿ ಮಹನೀಯರು, ಶಾಲೆಯ ಮುಖ್ಯೋಪಾಧ್ಯಾಯರು, ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.