

ಹುಕ್ಕೇರಿ: ಮಂಗಳೂರಿನ ವಿಜ್ಡಂ ಫೌಂಡೇಷನ್ ಹುಕ್ಕೇರಿ ಹೊರವಲಯದ ಬಾಪೂಜಿ ಸ್ವತಂತ್ರ ಸಂಯೋಜಿತ ವಸತಿ ಪಿಯು ಕಾಲೇಜ್‌ನೊಂದಿಗೆ ಸೇರಿ ಈ ಭಾಗದ ಮಕ್ಕಳನ್ನು ಸ್ಪರ್ಧಾತ್ಮಕವಾಗಿ ರೂಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಕುರಣಿಯ ಗಂಗಾದೇವಿ ಮಠದ ಆನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊರವಲಯದ ಬಾಪೂಜಿ ಪಿಯು ಕಾಲೇಜ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಾಪೂಜಿ ಜ್ಞಾನಜ್ಯೋತಿ ಮತ್ತು ಸ್ಪರ್ಧಾತ್ಮಕ ತರಬೇತಿ ನೀಡುವ ಒಪ್ಪಂದ ಪತ್ರದ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಭಾಗದ ಪಾಲಕರು ಮಂಗಳೂರು, ಉಡುಪಿ ಕಾಲೇಜ್‌ನಲ್ಲಿ ಹೆಚ್ಚಿನ ಶುಲ್ಕ ಭರಿಸಿಯಾದರೂ ಓದಿಸಬೇಕೆಂಬ ಮನೋಭಾವ ಹೊಂದಿದ್ದಾರೆ. ಅದರಿಂದ ಆ ಭಾಗದಲ್ಲಿ ಸಿಗುವ ಕಲಿಕೆಯನ್ನು ಇಲ್ಲೂ ಕಲ್ಪಿಸಬೇಕೆಂದು ಅಲ್ಲಿನ ಪ್ರತಿಷ್ಠಿತ ತರಬೇತುದಾರರನ್ನು ಕರೆಸಿ ತರಬೇತಿ ನೀಡುತ್ತಿದ್ದಾರೆ. ಇದರಿಂದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯುತ್ತಾರೆ ಎಂದರು.
ವಿಜ್ಡಂ ಫೌಂಡೇಷನ್ ಸಹ ಸಂಸ್ಥಾಪಕ ಡಾ.ಗುರುತೇಜ ಮಾತನಾಡಿ, ಸ್ಪರ್ಧಾತ್ಮಕ ತರಬೇತಿ ನೀಡುವ ಒಪ್ಪಂದ ಜಿಲ್ಲೆಯಲ್ಲಿ ಈ ಬಾಪೂಜಿ ಶಿಕ್ಷಣ ಸಂಸ್ಥೆಯೊಂದಿಗೆ ಮಾತ್ರ ಮಾಡಿಕೊಂಡಿದ್ದೇವೆ. ಐಎಎಂ, ಐಐಟಿ, ನೀಟ್, ಸಿಇಟಿ, ಎನ್‌ಡಿಎ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಂಗಳೂರಿನ ಪರಿಣಿತರು ಆಗಮಿಸಿ ಶನಿವಾರ ಮತ್ತು ಭಾನುವಾರ ತರಬೇತಿ ನೀಡಿ ಉತ್ತಮ ರ‍್ಯಾಂಕ್ ಪಡೆಯುವ ಗುರಿ ಹೊಂದಿದೆ ಎಂದರು.
ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂಜಯಕುಮಾರ, ಮಮದಾಪುರದ ಚರಂತೇಶ್ವರ ಮಠದ ಡಾ.ಸಿದ್ದಲಿಂಗ ದೇವರು ಮಾತನಾಡಿದರು.
ಸಂಸ್ಥೆಯ ನಿರ್ದೇಶಕ ಪ್ರಶಾಂತ ಕಟಾಂಬಳೆ, ಸಿಇಒ ಎಂ.ಎನ್.ಉಪ್ಪಾರ, ಆಡಳಿತಾಧಿಕಾರಿಗಳಾದ ಬಸವರಾಜ ಅಮ್ಮಣಗಿ, ಅರ್ಜುನ ಸಣ್ಣಕ್ಕಿನವರ, ಮಲ್ಲಿಕಾರ್ಜುನ ಚೌಗಲಾ, ಉಪನ್ಯಾಸಕ ರಮೇಶ ಡಬ್ಬು, ಕೌಶಿಕಗೌಡ, ರತೀಶ ಬಿ.ಎನ್ ಇತರರಿದ್ದರು. ಉಪನ್ಯಾಸಕರಾದ ಮಾನಸಿ ಪ್ರಾರ್ಥಿಸಿದರು. ಸುರೇಖಾ ಖಾನಾಪೂರೆ ಸ್ವಾಗತಿಸಿದರು. ಅಕ್ಷತಾ ನಿರೂಪಿಸಿದರು. ಬಸವರಾಜ ಅಮ್ಮಣಗಿ ವಂದಿಸಿದರು.