ವಿಜ್ಞಾನದಿಂದ ಉತ್ತಮ ಉದ್ಯೋಗಾವಕಾಶ

03Kush002
Published on

ಕುಶಾಲನಗರ: ವಿಜ್ಞಾನವು ಉತ್ತಮ ಉದ್ಯೋಗಾವಕಾಶ ಒದಗಿಸುವುದು ಮಾತ್ರವಲ್ಲದೆ ನಮ್ಮ ದೈನಂದಿನ ಜೀವನದಲ್ಲಿ ತುಂಬಾ ಉಪಯುಕ್ತವಾಗಿದೆ. ಅದು ನಮ್ಮ ಜೀವನವನ್ನು ಪರಿವರ್ತಿಸುತ್ತದೆ ಮತ್ತು ಯೋಚಿಸಲು ಹೊಸ ದಿಕ್ಕನ್ನು ಒದಗಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಜೀವರಸಾಯನಶಾಸ್ತ್ರ ವಿಭಾಗದ ಪ್ರೊ.ಕೆ. ಕೆಂಪರಾಜು ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿರುವ ವಿಜ್ಞಾನ ಸಂಕೀರ್ಣದ ಪುಷ್ಪಗಿರಿ ಸಭಾಂಗಣದಲ್ಲಿ ಶುಕ್ರವಾರ ವಿಜ್ಞಾನ ವಿಭಾಗಗಳಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜ್ಞಾನವು ಮಾನವನ ಜೀವನವನ್ನು ಉತ್ತಮ ಮತ್ತು ಸುಲಭಗೊಳಿಸಿದೆ. ವೈಜ್ಞಾನಿಕ ಬೆಳವಣಿಗೆಯು ಮಾನವನ ಜೀವನವನ್ನು ಅನೇಕ ಪಟ್ಟು ಬದಲಾಯಿಸಿದೆ. ಆದ್ದರಿಂದ, ವಿಜ್ಞಾನವು ನಮ್ಮ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ ಎಂದರು.

ಪ್ರೊ.ಕೆ.ಕೆ. ಧರ್ಮಪ್ಪ ಮಾತನಾಡಿದರು. ಗಣಕ ವಿಜ್ಞಾನ ವಿಭಾಗದ ವತಿಯಿಂದ ಕಂಪ್ಯೂಟರ್ ರಸಪ್ರಶ್ನೆ, ರಸಾಯನಶಾಸ್ತ್ರ ವಿಭಾಗದಿಂದ ಪೋಸ್ಟರ್ ಕೊಲಾಜ್, ಸಸ್ಯಶಾಸ್ತ್ರ ವಿಭಾಗದಿಂದ ಫೋಟೋಗ್ರಫಿ, ಜೀವರಸಾಯನಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಐ.ಕೆ. ಮಂಜುಳಾ, ಡಾ.ಬಿ.ಎಸ್. ಗುಣಶ್ರೀ, ವಿಜ್ಞಾನ ವಿಭಾಗಗಳ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net