ವಿಜ್ಞಾನದ ಜತೆ ಮಹಾಕಾವ್ಯಗಳ ಹೋಲಿಕೆ ಅಪಾಯಕಾರಿ: ಪ್ರಿಯಾಂಕ್ ಖರ್ಗೆ ಕಳವಳ

16
Published on

ಮೈಸೂರು: ಪುರಾಣಗಳು ಮತ್ತು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತವನ್ನು ಇತಿಹಾಸವೆಂದು ಬಿಂಬಿಸಲಾಗುತ್ತಿದ್ದು, ವಿಜ್ಞಾನದೊಂದಿಗೂ ಹೋಲಿಕೆ ಮಾಡುತ್ತಿರುವುದು ಅಪಾಯಕಾರಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ಅಭಿಯಂತರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಪುರಾಣ, ಶಾಸ್ತ್ರ, ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ ನಮ್ಮ ಸಂಸ್ಕೃತಿ. ಅವೆಲ್ಲವನ್ನೂ ಓದಬೇಕು. ಆದರೆ ಇದನ್ನೇ ಇತಿಹಾಸ, ಚರಿತ್ರೆ ಎಂದು ಬೋಧಿಸಿದರೆ ಪ್ರಶ್ನಿಸಬೇಕು ಎಂದರು. .

ದೇಶದ ಬದಲಾವಣೆಗೆ ಅಮೂಲಾಗ್ರ ಕೊಡುಗೆ ನೀಡಿರುವ ಇಂಡಿಯನ್ ಸೈನ್ಸ್ ಕಾಂಗ್ರೆಸ್, ಇದೀಗ ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡದೇ ಪುರಾಣದೊಂದಿಗೆ ವಿಜ್ಞಾನವನ್ನು ಸಮೀಕರಿಸಿ ಹೇಳಿಕೆ ನೀಡುತ್ತಿದೆ ಎಂದು ಬೇಸರಿಸಿದರು.
ಕೇಸರಿ ಶಾಲಿನಿಂದ ದೂರವಿರಿ:
ಯುವಕರು ಕೇಸರಿ ಶಾಲಿನಿಂದ ದೂರವಿರಬೇಕು. ಈ ಶಾಲು ಹಾಕಿಕೊಳ್ಳುವಂತೆ ಹೇಳುವ ನಾಯಕರಿಗೆ ಮತ್ತು ಮಂತ್ರಿಗಳಿಗೆ ನಿಮ್ಮ ಮಕ್ಕಳು ಕೇಸರಿ ಶಾಲು ಹಾಕಿದ್ದಾರೆಯೇ? ಕೇಸರಿ ಶಾಲು ಹಾಕಿದ ಮಾತ್ರಕ್ಕೆ ಸಮಸ್ಯೆಗಳು ಬಗೆಹರಿಯುತ್ತೇವೆಯೇ? ಅಸ್ಪಶ್ಯತೆ ಹೋಗುತ್ತದೆಯೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಧರ್ಮ ರಕ್ಷಣೆ ಮಾಡುವಂತೆ ಹಿಂದುಳಿದ, ದಲಿತ ಯುವಕರನ್ನು ಬೀದಿಗೆ ತಂದು ನಿಲ್ಲಿಸುವ ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಕೊಡಿಸಿ ಉದ್ಯಮಿಗಳನ್ನಾಗಿ ಬೆಳೆಸಿದ್ದಾರೆ. ಆದ್ದರಿಂದ ಹಿಜಾಬ್, ಕೇಸರಿ, ಹಲಾಲ್ ಕಟ್, ಜಟ್ಕಾ ಕಟ್ ಎಲ್ಲ ಬಿಟ್ಟು ಉದ್ಯೋಗ ಕೊಡುವಂತೆ ಸರ್ಕಾರವನ್ನು ಯುವ ಜನರು ಪ್ರಶ್ನಿಸಬೇಕು ಎಂದು ಹೇಳಿದರು.

ಜ್ಞಾನಾಧಾರಿತ ಸಮಾಜ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ. ಆಗ ಭಾರತ ನಂ. 1 ಸ್ಥಾನದಲ್ಲಿರುತ್ತದೆ. ಶಿಕ್ಷಣ ಪಡೆಯುವ ಜತೆಗೆ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು. ಆದರೆ, ಯುವಕರು ಸಾಮಾಜಿಕ ಜಾಲತಾಣದ ದಾಸರಾಗುತ್ತಿದ್ದಾರೆ. ಅದರಿಂದ ಆಚೆಗೆ ಪ್ರತಿಯೊಬ್ಬರೂ ಬರಬೇಕು. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಬಂದಿರುವುದನ್ನು ಪ್ರಶ್ನಿಸುವ ಮನೋಧರ್ಮ ಬೆಳೆಸಿಕೊಳ್ಳಬೇಕು ಎಂದರು.


ಸನ್ಮಾನ: ಸಾಮಾಜಿಕ ಹೋರಾಟಗಾರರಾದ ಬೆಟ್ಟಯ್ಯ ಕೋಟೆ, ಚಿಕ್ಕಜವರಯ್ಯ, ಚೋರನಹಳ್ಳಿ ಶಿವಣ್ಣ, ನಿವೃತ್ತ ಇಂಜಿನಿಯರ್ ಟಿ.ಆರ್.ಶಿವರಾಮು, ರಾಜಶೇಖರ್ ಎಡಹಳ್ಳಿ, ಆರ್.ಕೆ.ರಾಜು, ಸುಬ್ಬರಾವ್ ಅವರನ್ನು ಸನ್ಮಾನಿಸಲಾಯಿತು. 127 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕೊಳ್ಳೇಗಾಲದ ಜೇತವನದ ಮನೋರಖ್ಖಿತ ಭಂತೇಜಿ, ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಅಶ್ವಿನ್ ಕುಮಾರ್, ಮಾಜಿ ಸಚಿವ

ಡಾ.ಎಚ್.ಸಿ.ಮಹದೇವಪ್ಪ, ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ, ಜಿಲ್ಲಾ ಅಧ್ಯಕ್ಷ ಪ್ರೊ.ಕೆ.ಸಿದ್ದರಾಜು, ಮಾಜಿ ಮೇಯರ್ ಪುರುಷೋತ್ತಮ್, ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net