

ದಾಬಸ್‌ಪೇಟೆ: ಧರ್ಮದ ಸಾಂಗತ್ಯವಿಲ್ಲದ ವಿಜ್ಞಾನ ಕುಂಟು, ವಿಜ್ಞಾನವನ್ನು ಅಪ್ಪಿಕೊಳ್ಳಕೊಳ್ಳದ ಧರ್ಮ ಕುರುಡು ಎಂದು ಹೊನ್ನಮ್ಮ ಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸೋಂಪುರ ಹೋಬಳಿ ಶಿವಗಂಗೆ ಹೊನ್ನಮ್ಮ ಗವಿ ಮಠದ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಜಿಲ್ಲಾ ಘಟಕ ಹಾಗೂ ನೆಲಮಂಗಲ ತಾಲೂಕು ಘಟಕಗಳ ಉದ್ಘಾಟನೆ ಮತ್ತು ಶಿಕ್ಷಣದಲ್ಲಿ ವೈಜ್ಞಾನಿಕ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮವನ್ನು ವೈಜ್ಞಾನಿಕ ಚೌಕಟ್ಟಿನಲ್ಲಿ ಹೇಗೆ ಆಚರಿಸಬಹುದು ಎಂಬುದನ್ನು ವಿವರಿಸಿದ ಅವರು, ಉಪವಾಸ, ಮೌನವ್ರತ, ಧ್ಯಾನ ಇವೆಲ್ಲವೂ ವೈಜ್ಞಾನಿಕವಾಗಿ ಧನಾತ್ಮಕ ಆಗಿವೆ ಎಂದು ನಮ್ಮ ಧಾರ್ಮಿಕ ಆಚರಣೆಗಳು ಒಪ್ಪಿಕೊಂಡಿವೆ ಎಂದರು.
ವೈದ್ಯ ಆಂಜಿನಪ್ಪ ಅವರು ಶಿಕ್ಷಣದಲ್ಲಿ ವೈಜ್ಞಾನಿಕ ಚಿಂತನೆ ಬಗ್ಗೆ ಉಪನ್ಯಾಸ ನೀಡಿದರು. ನಿತ್ಯ ಜೀವನದಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ಅದನ್ನು ಗುರುತಿಸಲು ವಿಫಲರಾಗುತ್ತಿದ್ಧೇವೆ. ಅರಿವಿಗೆ ಬಾರದಂತೆ ಜನಸಾಮಾನ್ಯರು ವೈಜ್ಞಾನಿಕ ಮಾರ್ಗದಲ್ಲೇ ಚಿಂತನೆ ನಡೆಸುತ್ತಾರೆ. ಅದನ್ನೇ ವಿಜ್ಞಾನ ಎಂದು ಹೇಳಲಾಗುತ್ತದೆ ಎಂದು ವಿವರಿಸಿದರು.
ವೈಜ್ಞಾನಿಕ ಪರಿಷತ್‌ನ ಕಾರ್ಯಕಾರಿಣಿ ಸದಸ್ಯ ಹುಲಿಕಲ್ ನಟರಾಜ್ ಮಾತನಾಡಿ, ಎಲ್ಲ ಧರ್ಮಗಳಲ್ಲೂ ವಿಜ್ಞಾನವನ್ನು ಮೂಢನಂಬಿಕೆ ಎಂಬಂತೆ ಬಿಂಬಿಸುವ ಕೆಲಸ ಆಗುತ್ತಿದೆ. ಇದನ್ನು ನಾವೆಲ್ಲರೂ ವಿರೋಧಿಸಬೇಕಾಗಿದೆ. ಇದು ಯಾವುದೇ ಧರ್ಮ, ಸಮಾಜ, ಜಾತಿಯನ್ನು ವಿರೋಧಿಸುವ ಕ್ರಮ ಅಲ್ಲ ಎಂದು ಸ್ಪಷ್ಟಪಡಿಸಿದರು.
ಕಸಾಪದ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಾಯಣ್ಣ ಅವರು ಸಾಹಿತಿ ಶಿವಪ್ರಸಾದ ಅವರ ಎರಡು ಕವನ ಸಂಕಲನ ಬಿಡುಗಡೆ ಮಾಡಿದರು. ಮಾಜಿ ಶಾಸಕ ನಾಗರಾಜು, ಜೆಡಿಎಸ್ ಹೋಬಳಿ ಅಧ್ಯಕ್ಷ ಭಾರತೀಪುರದ ಮೋಹನ್‌ಕುಮಾರ್, ಬಿಜೆಪಿ ತಾಲೂಕು ಉಪಾಧ್ಯಕ್ಷ ಜಗದೀಶ್ ಚೌಧರಿ, ಹೊನ್ನೇನಹಳ್ಳಿ ಗ್ರಾಪಂ ಅಧ್ಯಕ್ಷ ಮುರಳೀಧರ, ಜಿಲ್ಲಾ ಸಂಘದ ಅಧ್ಯಕ್ಷ ಹೊನ್ನಶಾಮಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ನರಸಿಂಹಯ್ಯ, ಕಲಾವಿದ ವೀರೇಶ್, ದೇವನಹಳ್ಳಿ ತಾಲೂಕು ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಹೊಸಕೋಟೆ ಅಧ್ಯಕ್ಷ ಉಮೇಶ್, ನೆಲಮಂಗಲ ಅಧ್ಯಕ್ಷ ರವಿಕುಮಾರ್, ಸ್ತ್ರೀಶಕ್ತಿ ಸಂಘದ ಖಜಾಂಚಿ ವೇದಾವತಿ, ಎಐಟಿಯುಸಿ ಅಧ್ಯಕ್ಷೆ ಜ್ಯೋತಿ,
ಮುಖಂಡ ರಾಯರಪಾಳ್ಯದ ಬಸವರಾಜು ಮತ್ತಿತರರಿದ್ದರು.