ವಿಜೃಂಭಣೆಯಿಂದ ಹಾಸನಾಂಬ ಉತ್ಸವ ಆಚರಣೆ ಸಿದ್ಧತೆ :ಸಚಿವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ವಿಜೃಂಭಣೆಯಿಂದ ಹಾಸನಾಂಬ ಉತ್ಸವ ಆಚರಣೆ ಸಿದ್ಧತೆ :ಸಚಿವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ
Published on

ಹಾಸನ: ಈ ಬಾರಿಯ ಹಾಸನಾಂಬ ಉತ್ಸವವನ್ನು ಜನರು ನೆನಪಿನಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಬೇಕು. ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಿದರೆ ನಿಮಗೂ ತಾಯಿಯ ಆಶೀರ್ವಾದ ಸಿಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಹಾಸನಾಂಬ ಜಾತ್ರಾ ಮಹೋತ್ಸವದ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹಾಸನಾಂಬ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಸುರಕ್ಷತೆ, ಸೌಕರ್ಯ ಸೇರಿದಂತೆ ಇತರೆ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಆಸಕ್ತಿಯಿಂದ ತಮ್ಮನ್ನು ತೊಡಗಿಕೊಳ್ಳುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಇರುವುದರಿಂದ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಕಳೆದ ಬಾರಿ 6 ಲಕ್ಷ ಜನರು ಆಗಮಿಸಿದ್ದಾರೆ. ಈ ಬಾರಿ 10 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಅದಕ್ಕೆ ಅನುಗುಣವಾಗಿ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಯಾವುದಾದರೂ ಲೋಪ ಕಂಡುಬಂದರೆ ತ್ವರಿತವಾಗಿ ಸರಿಪಡಿಸುವ ಕೆಲಸವಾಗಬೇಕು. ಸಿಸಿಟಿವಿ ಕ್ಯಾಮರಾ, ವಾರ್ ರೂಂ, ಸೂಚನ ಫಲಕಗಳು, ಬ್ಯಾನರ್ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಭಕ್ತರಿಗೆ ವಿತರಣೆ ಮಾಡುವ ಪ್ರಸಾದ ಗುಣಮಟ್ಟದಿಂದ ಕೂಡಿರಬೇಕು. ಚೆನ್ನಾಗಿಲ್ಲದಿದ್ದರೆ ಭಕ್ತರು ಸೇವನೆ ಮಾಡದೆ ಎಸೆಯುತ್ತಾರೆ. ಅದಕ್ಕೆ ಅವಕಾಶ ನೀಡಬಾರದು. ಗುಣಮಟ್ಟದ ಪ್ರಸಾದ ತಯಾರಿಸುವವರಿಗೆ ಟೆಂಡರ್ ನೀಡಿ. ಎಷ್ಟೇ ಹಣ ಖರ್ಚಾದರೂ ಸರಿ, ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ವಿಚಾರದಲ್ಲಿ ಯಾರ ಶಿಫಾರಸ್ಸಿಗೆ ಒಳಗಾಗಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಹಾಸನಾಂಬ ಮಹೋತ್ಸವದ ಪ್ರಯುಕ್ತ ಹಾಸನ್ ಬೈ-ಸ್ಲೈ ಹೆಲಿಟೂರಿಸಂ, ಪ್ಯಾರಗ್ಲೈಡಿಂಗ್, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ಯಾಕೇಜ್ ಟೂರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ದೇವಾಲಯದ ಆಡಳಿತಾಧಿಕಾರಿ ಮಾರುತಿ ಮಾತನಾಡಿ, ದೇವಸ್ಥಾನಕ್ಕೆ ಸುಣ್ಣ-ಬಣ್ಣ ಬಳಿಯುವ ಕೆಲಸ ನಡೆಯುತ್ತಿದ್ದು, ಎರಡ್ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳಲ್ಲಿ ದೀಪಾಲಂಕಾರಕ್ಕೆ ಒತ್ತು ನೀಡಲಾಗಿದೆ. ಭಕ್ತರಿಗೆ ದಿನದ 24 ಗಂಟೆಗಳ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರ ಅನುಕೂಲಕ್ಕಾಗಿ ನೆರಳಿನ ವ್ಯವಸ್ಥೆ, ಕುಡಿಯಲು ನೀರು- ಮಜ್ಜಿಗೆ, ಫ್ಯಾನ್, ಮ್ಯಾಟ್, ಬ್ಯಾರಿಕೇಡ್ ಅಳವಡಿಕೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಗರ್ಭಗುಡಿ ಬಳಿ ಎ.ಸಿ. ವ್ಯವಸ್ಥೆ ಮಾಡಲಾಗಿದೆ. ವಿಶೇಷ ದರ್ಶನಕ್ಕಾಗಿ 300 ರೂ. 1000 ರೂ. ಪಾಸ್ ಮಾಡಿದ್ದು, ಕ್ಯೂ.ಆರ್ ಕೋಡ್ ಸಿಸ್ಟಂ ಮಾಡಲಾಗಿದ್ದು, ಪರಿಶೀಲಿಸಿ ಒಳಗೆ ಬಿಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ 24 ಶೌಚಾಲಯದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ 50 ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ. 10 ಕಿ.ಮೀ. ಬ್ಯಾರಿಕೇಡ್ ಅಳವಡಿಕೆ ಮಾಡಲಾಗುವುದು. ಅಧಿಕಾರಿಗಳಿಗೆ ಡಿಜಿಟಲ್ ಐ.ಡಿ ಕಾರ್ಡ್ ವ್ಯವಸ್ಥೆ, ಅಂಗವಿಕಲರಿಗೆ ನಾಲ್ಕು ಎಲೆಕ್ಟ್ರಿಕ್ ವಾಹನ ಸೌಲಭ್ಯ ಮಾಡಿಕೊಳ್ಳಲಾಗಿದೆ. ಪೊಲೀಸರೊಂದಿಗೆ ಭಕ್ತರಿಗೆ ನೆರವಾಗಲು ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು.
ನೇರ ಪ್ರಸಾರಕ್ಕೆ ವ್ಯವಸ್ಥೆ:
ಗರ್ಭಗುಡಿಯಲ್ಲಿ ನಡೆಯುವ ಪೂಜೆಯನ್ನು ಸರತಿ ಸಾಲಿನಲ್ಲಿ ನಿಂತಿರುವ ಭಕ್ತರ ವೀಕ್ಷಣೆಗಾಗಿ ನೇರ ಪ್ರಸಾರದ ವ್ಯವಸ್ಥೆ ಮಾಡಬೇಕು ಎಂದು ಸಚಿವರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಮಾರುತಿ, ಸರತಿ ಸಾಲಿನಲ್ಲಿ 1 ಸಾವಿರ ಟಿ.ವಿ.ಗಳ ಜತೆಗೆ 8 ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗುವುದು. ನೇರ ಪ್ರಸಾರದ ಜತೆಗೆ ಟಿ.ವಿ. ಗಳಲ್ಲಿ ಮಹಾಭಾರತ ಧಾರಾವಾಹಿ ಕೂಡ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ, ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿ ಪೂರ್ಣಿಮಾ ಮತ್ತಿತರರು ಹಾಜರಿದ್ದರು.
---

ಪೋಟೋ ಶೀರ್ಷಿಕೆ
11 ಎಚ್‌ಎಸ್‌ಎನ್06
ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅಧ್ಯಕ್ಷತೆಯಲ್ಲಿ ಸಿದ್ಧತಾ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಡಿಸಿ ಸಿ. ಸತ್ಯಭಾಮಾ, ಮಾರುತಿ, ಮೊಹಮದ್ ಸುಜಿತಾ, ಬಿ.ಆರ್. ಪೂರ್ಣಿಮಾ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net