

ಚಾಮರಾಜನಗರ: ದೀಪಾವಳಿ ಹಬ್ಬದ ಬಲಿಪಾಡ್ಯಮಿಯ ಮಾರನೇಯ ದಿನ ನಡೆಯುವ ವಿಶೇಷವಾದ ಗೊರೆಹಬ್ಬ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗೊರೆಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಗ್ರಾಮದ ಪುರುಷರು, ಯುವಕರೆಲ್ಲರೂ ಒಂದೆಡೆ ಸೇರಿ ಸಗಣಿಯಲ್ಲಿ ಹೊಡೆದಾಡಿಕೊಂಡು ಗೊರೆಹಬ್ಬವನ್ನು ಆಚರಣೆ ಮಾಡಿದರು. ಬೆಳಗ್ಗೆಯಿಂದಲೇ ಸಗಣಿಯನ್ನು ಸಂಗ್ರಹ ಮಾಡುವ ಕಾರ್ಯದಲ್ಲಿ ನಿರತರಾಗಿದ್ದ ಯುವಕರು, ಮಧ್ಯಶಹ್ನವಾಗುತ್ತಿದ್ದಂತೆ ಸಗಣಿಯನ್ನು ಪರಸ್ಪರ ಎಸೆದಾಡಿದರು. ಒಬ್ಬರನ್ನೊಬ್ಬರು ಮನಬಂದಂತೆ ನಿಂದಿಸುವುದು ಹಾಗೂ ಗೋವಿನ ಸಗಣಿಯನ್ನು ಉಂಟೆ ಮಾಡಿಕೊಂಡು ಪರಸ್ಪರ ಹೊಡೆದಾಡಿಕೊಳ್ಳುವುದು ಈ ಹಬ್ಬದ ವಿಶೇಷವಾಗಿದೆ. ಗೊರೆ ಹಬ್ಬದ ಅಂಗವಾಗಿ ಇಡೀ ಗ್ರಾಮವನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು.
ವಿದೇಶಿಯರು ಭಾಗಿ:
ತಾಳವಾಡಿಯಲ್ಲಿ ಆಚರಿಸುವ ಗೊರೆಹಬ್ಬಕ್ಕೆ ಈ ಬಾರಿ ವಿದೇಶಿಯರು ಭಾಗಿಯಾಗಿದ್ದು ಮತ್ತಷ್ಟು ವಿಶೇಷವಾಗಿತ್ತು. ಗೊರೆಹಬ್ಬವನ್ನು ವೀಕ್ಷಣೆ ಮಾಡಿ, ಅದನ್ನು ಚಿತ್ರೀಕರಿಸಿಕೊಳ್ಳಲು ಯುರೋಪಿನಿಂದ ಆಗಮಿಸಿದ್ದ ಇಬ್ಬರು ಗೊರೆಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು. ಗೊರೆಹಬ್ಬದಲ್ಲಿ ಭಾಗಿಯಾಗಿ ತಾವುಸಹ ಸಗಣಿಯನ್ನು ಬಳಿದುಕೊಂಡು ಸಂಭ್ರಮಿಸಿದರು. ಈ ಮೂಲಕ ವಿದೇಶಿಯರು ಸಾಮರಸ್ಯವನ್ನು ಸಾರಿದರು.