ವಿಜೃಂಭಣೆಯಿಂದ ಜರುಗಿದ ದುರ್ಗಾಹೋಮ

Durgammadevi
Published on

ಚಿತ್ರದುರ್ಗ: ಬುರುಜನಹಟ್ಟಿಗೆ ಹೊಂದಿಕೊಂಡಿರುವ ಕೋಟೆಯ ಬಂದಿಖಾನೆ ಸಮೀಪದ ಜಲಮಾಲೆ ದುರ್ಗಮ್ಮ ದೇವಿಯ ಸನ್ನಿಧಿಯಲ್ಲಿ ದುರ್ಗಾಹೋಮ ಪೂಜಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಮಹೋತ್ಸವದ ಪ್ರಯುಕ್ತ ಜಲಮಾಲೆ ದುರ್ಗಮ್ಮ, ಮಲೆನಾಡ ಚೌಡೇಶ್ವರಿ ದೇವಿಯ ಮೂರ್ತಿಯನ್ನು ವಿವಿಧ ಬಗೆಯ ಪುಷ್ಪಗಳಿಂದ ಅರ್ಚಕರು ಸುಂದರವಾಗಿ ಅಲಂಕರಿಸಿದ್ದರು.

ದೇಗುಲದ ಇಡೀ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಸೇವೆ ಬಳಿಕ ನೂರಾರು ಭಕ್ತರ ಸಮ್ಮುಖದಲ್ಲಿ ದುರ್ಗಾಹೋಮ ನೆರವೇರಿತು. ಮಧ್ಯಾಹ್ನ ಪೂರ್ಣಾಹುತಿ, ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು.

ಮಲೆನಾಡ ಚೌಡೇಶ್ವರಿ ದೇವಿ ನೇತೃತ್ವದಲ್ಲಿ ಸಿಹಿನೀರು ಹೊಂಡದಲ್ಲಿ ಗಂಗಾಪೂಜೆ ನೆರವೇರಿತು. ನಂತರ ಮೆರವಣಿಗೆ ಮೂಲಕ ದೇಗುಲಕ್ಕೆ ಕರೆತರಲಾಯಿತು. ಮಹಿಳೆಯರು ಕುಂಭ ಹೊತ್ತು ಸಾಗಿದರು. ಉರುಮೆ ವಾದ್ಯ ಮೆರುಗು ನೀಡಿತು. ಆರೋಗ್ಯವೇ ಭಾಗ್ಯ ಯುವಕರ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net