ವಿಜೃಂಭಣೆಯ ಹನುಮಂತೋತ್ಸವ, ಗರುಡೋತ್ಸವ

6blrp1
Published on

ಬೇಲೂರು: ಬೇಲೂರಿನಲ್ಲಿ ಕಳೆದ ಎರಡು ದಿನ ಶ್ರೀಚನ್ನಕೇಶವಸ್ವಾಮಿ ನಾಡ ರಥೋತ್ಸವದ ನಂತರ ಬುಧವಾರ ರಾತ್ರಿ ಹನುಮಂತೋತ್ಸವ, ಗರುಡೋತ್ಸವ ಹಾಗೂ ದೇವರ ಅಡ್ಡಪಲ್ಲಕ್ಕಿ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಹನುಮಂತೋತ್ಸವ, ಗರುಡೋತ್ಸವ ಹಾಗೂ ದೇವರ ಅಡ್ಡಪಲ್ಲಕ್ಕಿ ಮಹೋತ್ಸವದ ಅಂಗವಾಗಿ ದೇಗುಲ ಆಡಳಿತ ಮಂಡಳಿಯಿಂದ ಬುಧವಾರ ಸಂಜೆಯಿಂದ ಭಕ್ತರು ದೇವರ ಉತ್ಸವ ಮೂರ್ತಿಯನ್ನು ಹೊತ್ತು ದೇಗುಲದ ಸುತ್ತಲೂ ಪ್ರದಕ್ಷಿಣೆ ಹಾಕಿ ಹರಕೆ ತೀರಿಸಿದರು. ರಾತ್ರಿ 8 ಗಂಟೆ ಸಮಯದಲ್ಲಿ ಹನುಮಂತೋತ್ಸವ ಮತ್ತು ಗರುಡೋತ್ಸವವನ್ನು ಟ್ರ್ಯಾಲಿ ಮೂಲಕ ನೆರವೇರಿಸಲಾಯಿತು. ರಾತ್ರಿ 10 ಗಂಟೆ ನಂತರದಲ್ಲಿ ಪ್ರಾರಂಭವಾದ ಚನ್ನಕೇಶವಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವವು ನೋಡುಗರ ಮನಸೆಳೆಯಿತು.
ಅಡ್ಡಪಲ್ಲಕ್ಕಿಯಲ್ಲಿ ಶ್ರೀಚನ್ನಕೇಶವಸ್ವಾಮಿ, ಸೌಮ್ಯನಾಯಕಿ ಹಾಗೂ ರಂಗನಾಯಕಿಯರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಅರ್ಚಕರು ಪೂಜೆ ಸಲ್ಲಿಸಿ ಉತ್ಸವವನ್ನು ಅಡ್ಡೆಗಾರರು ಹೊತ್ತು ಹೊರಡುತ್ತಿದ್ದಂತೆಯೇ ಭಕ್ತರು ಪಲ್ಲಕ್ಕಿಯ ಹಿಂದೆ ಮುಂದೆ ಓಡೋಡಿ ಹೋಗುತ್ತಿದ್ದು ಕಾಣಬಹುದಾಗಿತ್ತು. ಈ ಉತ್ಸವಗಳನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ಶ್ರೀಚನ್ನಕೇಶವಸ್ವಾಮಿ ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟರ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಸದಸ್ಯರಾದ ಮೋಹನ್ ಕುಮಾರ್, ರವಿಶಂಕರ್, ಅಡ್ಡೆಗಾರರಾದ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net