

ಕೆ.ಆರ್.ಪೇಟೆ: ತಾಲೂಕಿನ ಹೊಸಹೊಳಲು ಗ್ರಾಮದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ತಾಲೂಕು ಮುಜರಾಯಿ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಅವರು ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಸರ್ವಾಲಂಕಾರಗೊಂಡ ಶ್ರೀಲಕ್ಷ್ಮೀನಾರಾಯಣಸ್ವಾಮಿಯವರ ಭವ್ಯ ರಥದ ಮೇಲೆ ಉತ್ಸವ ಮೂರ್ತಿ ಅಲಂಕರಿಸುತ್ತಿದ್ದಂತೆ ಭಕ್ತಸಾಗರದಿಂದ ಶ್ರೀಲಕ್ಷ್ಮೀನಾರಾಯಣ ಗೋವಿಂದ, ಶ್ರೀನಿವಾಸ ಗೋವಿಂದ, ವೆಂಕಟರಮಣ ಗೋವಿಂದ.... ನಾಮಸ್ಮರಣೆಗಳು ಮುಗಿಲು ಮುಟ್ಟಿದವು.
ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ಭಕ್ತಸಾಗರದೊಂದಿಗೆ ರಥೋತ್ಸವನ್ನು ಎಳೆದು ಮಾತನಾಡಿದ ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಪ್ರತಿವರ್ಷವೂ ಅತ್ಯಂತ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಆಚರಿಸಲಾಗುತ್ತದೆ. ಲಕ್ಷ್ಮೀನಾರಾಯಣಸ್ವಾಮಿ ದೇವರ ಆಶೀರ್ವಾದದಿಂದ ತಾಲ್ಲೂಕಿನ ಎಲ್ಲಾ ಜನತೆಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಜಾನಪದ ಕಲಾತಂಡಗಳ ನೃತ್ಯವು ರಥೋತ್ಸವ ಮತ್ತು ಜಾತ್ರಾ ಸೌಂದರ್ಯವನ್ನು ಹೆಚ್ಚಿಸಿದ್ದವು.
ಭಕ್ತರು ಶ್ರೀರಥದ ಕಳಸಕ್ಕೆ ಹಣ್ಣು-ಧವನ ಎಸೆದು ಪುನೀತರಾದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಪುಳಿಯೋಗರೆ, ಮೊಸರನ್ನ, ಮಜ್ಜಿಗೆ-ಪಾನಕ ಪ್ರಸಾದವನ್ನು ದೇವಾಲಯ ಸಮಿತಿ ವತಿಯಿಂದ ವಿತರಿಸಲಾಯಿತು.
ಶಾಸಕರ ಸಹೋದರ ಎಚ್.ಟಿ.ಲೋಕೇಶ್, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತ ಅಧಿಕಾರಿ ಜಗದೀಶ್ ಇದ್ದರು.
ಡಿವೈಎಸ್ಪಿ ಚಲುವರಾಜು, ಇನ್ಸ್‌ಪೆಕ್ಟರ್ ಸುಮಾರಾಣಿ ನೇತೃತ್ವದಲ್ಲಿ ಹೊಸಹೊಳಲು ಜ್ರಾತ್ರೆ ಮತ್ತು ರಥೋತ್ಸವ ನಡೆಯುವ ಸ್ಥಳದಲ್ಲಿ ಮೊಕ್ಕಾಂ ಹೂಡಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.