ವಿಜೃಂಭಣೆಯ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ

07BTP02
ಟ್ಟದಪುರದಲ್ಲಿ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಮಂಗಳವಾರ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ವಿವಿಧ ಪುಷ್ಪಗಳು, ಕೇಸರಿ ಒಳಗೊಂಡ ಮತ್ತು ಬಣ್ಣಗಳ ಬಾವುಟಗಳಿಂದ ಅಲಂಕೃತಗೊಂಡ ಮೂರು ರಥದ ಮೇಲೆ ಕ್ರಮವಾಗಿ ಬೆಳ್ಳಿಬಸಪ್ಪ, ಗಣಪತಿ ಹಾಗೂ ಗಿರಿಜಮ್ಮ ಮಲ್ಲಯ್ಯ ದೇವರ ಉತ್ಸವ ಮೂರ್ತಿಗಳನ್ನು ಕೂರಿಸಲಾಯಿತು. ಬೆಳಿಗ್ಗೆ 9.30ರ ಶುಭಗಳಿಗೆಯಲ್ಲಿ ಗಣ್ಯರು ರಥಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.

ಬಳಿಕ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಹಾಗೂ ಸ್ಥಳೀಯರು ಒಟ್ಟಾಗಿ ಸೇರಿ ಮೊದಲು ಬೆಳ್ಳಿ ಬಸಪ್ಪ ನಂತರ ಗಣಪತಿ ಮತ್ತು ಕೊನೆಯಲ್ಲಿ ಗಿರಿಜಮ್ಮ ಮಲ್ಲಯ್ಯ ರಥಗಳನ್ನು ಒಂದೊಂದಾಗಿ ಎಳೆದು ಭಕ್ತಿ ಸಮರ್ಪಣೆ ಮಾಡಿದರು. ಇದೆ ವೇಳೆ ಶಾಸಕ ಕೆ.ಮಹದೇವ್, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಸೇರಿದಂತೆ ಹಲವಾರು ಗಣ್ಯರು ಹಾಗೂ ತಹಸೀಲ್ದಾರ್ ಎಂ.ಎಸ್. ಯದುಗಿರೀಶ್, ಉಪತಹಸೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಆನಂದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ದೇವರ ದರ್ಶನ ಪಡೆದರು.

ಕಳೆದು ಎರಡು ವರ್ಷಗಳಿಂದ ಕರೋನಾ ಸೋಂಕಿನ ಕಾರಣ ಮುಂದಿಟ್ಟುಕೊಂಡು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ರಥೋತ್ಸವ ರದ್ದುಗೊಳಿಸಿ, ದೇವಸ್ಥಾನದ ಆವರಣದಲ್ಲಿ ಮಾತ್ರ ಮೆರವಣಿಗೆಗೆ ಅವಕಾಶ ನೀಡಿತ್ತು. ಈ ಬಾರಿ ಅದ್ಯಾವ ಕಟ್ಟುಪಾಡು ಇಲ್ಲದ ಕಾರಣ ಮೊದಲಿನ ಸಂಪ್ರಾಯದಂತೆ ರಥೋತ್ಸವವು ಸಂಪನ್ನಗೊಂಡಿತ್ತು.

ರಥೋತ್ಸವದ ಹಿನ್ನಲೆ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಉತ್ತರ ದಿಕ್ಕಿನಲ್ಲಿ ಇರುವ ಪ್ರಸಿದ್ಧ ಏಣಿ ಹನುಮಂತ (ವೀರಾಂಜನೇಯನ ಗುಡಿ) ಮತ್ತು ಗ್ರಾಮದ ಹೃದಯಭಾಗದಲ್ಲಿ ಇರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಪವಾಡ ಬಸವೇಶ್ವರ ದೇವಸ್ಥಾನಗಳಿಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು.

ಬೆಟ್ಟ ಹತ್ತಿಳಿದ ಭಕ್ತರು: ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರಲ್ಲಿ ಹೆಚ್ಚಿನವರು ಯುವಕ ಹಾಗೂ ಯುವತಿಯರು ಮಂಗಳವಾರ ಮುಂಜಾನೆಯಿಂದಲ್ಲೇ ಸುಮಾರು 3108 ಮೆಟ್ಟಿಲುಗಳ ಇರುವ ಬೆಟ್ಟವನ್ನು ಹತ್ತಿ ಮೇಲಿನ ಗುಡಿಯಲ್ಲಿ ಇರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿದರು. ಕಳೆದ ಎರಡು ವರ್ಷಗಳಿಗಿಂತ ಈ ಬಾರಿ ಅತಿ ಹೆಚ್ಚು ಭಕ್ತರು ಇದ್ದದ್ದರಿಂದ ಮೆಟ್ಟಿಲುಗಳ ಉದ್ದಕ್ಕೂ ನೀರಿನ ಬಾಟಲ್, ಮಜ್ಜಿಗೆ ಮತ್ತು ಜ್ಯೂಸ್ ಮಾರಾಟ ಮಾಡುವ ಸಣ್ಣಪುಟ್ಟ ಅಂಗಡಿಗಳು ಭರ್ಜರಿ ವ್ಯಾಪಾರ ವಹಿವಾಟು ನಡೆಸಿದವು. ಬಿಸಿಲಿನ ತಾಪವು ಹೆಚ್ಚಳವಾಗುತ್ತಿದ್ದಂತೆ ಭಕ್ತರು ನೀರು, ಮಜ್ಜಿಗೆ ಹಾಗೂ ಜ್ಯೂಸ್‌ಗಳ ಮೊರೆ ಹೋಗಿದ್ದು ಕಂಡುಬಂತು.

ಗಿರಿಜಾ ಕಲ್ಯಾಣೊತ್ಸವ ಸಂಪನ್ನ: ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮೀ ದೇವಸ್ಥಾನದ ಆವರಣದಲ್ಲಿ ಸೋಮವಾರ ರಾತ್ರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶೀ ಭ್ರಮರಾಂಬ ದೇವಿಯ ಗಿರಿಜಾ ಕಲ್ಯಾಣ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ದೇವಸ್ಥಾನದ ಅರ್ಚಕ ಸತೀಶ್ ಕಶ್ಯಪ್ ಮತ್ತು ತಂಡದವರಿಂದ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ಮಂಟಪದಲ್ಲಿ ಕಲ್ಯಾಣ ಮಹೋತ್ಸವದ ವಿಶೇಷ ಪೂಜೆಗಳು ಜರುಗಿದ್ದವು. ಈ ವೇಳೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು.

ಬೆಟ್ಟದಪುರ ಪೊಲೀಸ್ ಠಾಣೆಯ ಸಬ್‌ಇನ್ಸಪೆಕ್ಟರ್ ಪ್ರಕಾಶ್ ಎಂ. ಎತ್ತಿನಮನಿ ನೇತೃತ್ವದಲ್ಲಿ ಬೆಟ್ಟ ಸೇರಿದಂತೆ ಗ್ರಾಮದ ವಿವಿಧೆಡೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೊಬಸ್ತ್ ಏರ್ಪಡಿಸಲಾಗಿತ್ತು. ಬೆಟ್ಟದಪುರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂಜಾ ಅವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಗ್ರಾಮದ ವಿವಿಧಕಡೆ ಆರೋಗ್ಯ ಶಿಬಿರ ತೆರೆಯಲಾಗಿತ್ತು. ಈ ಆರೋಗ್ಯ ಶಿಬಿರದಲ್ಲಿ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಯಿತು.

ಐತಿಹಾಸಿಕ ಹಿನ್ನಲೆ ಇರುವ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಮೂರು ರಥಗಳ ಪೈಕಿ ಬೆಳ್ಳಿ ಬಸಪ್ಪ ಹಾಗೂ ಗಣಪತಿ ಮೂರ್ತಿಗಳನ್ನು ಕೂರಿಸುವ ರಥಗಳು ಶಿಥಿಲವಾಗಿದೆ. ಸ್ವಾಮಿಯ ಭಕ್ತರು ಹಾಗೂ ಸಮಿತಿಯವರು ನೂತನ ರಥ ಮಾಡಿಸಲು ಮುಂದಾಗಲಿ. ನಾನು ಸಹ ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಿಸುವುದಕ್ಕೆ ಕ್ರಮವಹಿಸುತ್ತೇನೆ.
ಕೆ.ಮಹದೇವ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net