ವಿಜೃಂಭಣೆಯ ಶ್ರೀ ಲಕ್ಷ್ಮೀವರದರಾಜಸ್ವಾಮಿ ಬ್ರಹ್ಮ ರಥೋತ್ಸವ

05-GPT-1A-LAKSHMI VARADARAJA RATHOTSVA
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಶ್ರೀ ಲಕ್ಷ್ಮೀವರದರಾಜಸ್ವಾಮಿಯ 14 ನೇ ವರ್ಷದ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಶ್ರೀ ಲಕ್ಷ್ಮೀವರದರಾಜಸ್ವಾಮಿ ದೇವಸ್ಥಾನದ 14ನೇ ವರ್ಷದ ಬ್ರಹ್ಮ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಕರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಪೂಜೆಗೆ ಸೀಮಿತವಾಗಿದ್ದ ರಥೋತ್ಸವವನ್ನು ಈ ಬಾರಿ ಗ್ರಾಮಸ್ಥರು ವಿಜೃಂಭಣೆಯಿಂದ ಆಚರಿಸಿದರು. ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಧ್ವನಿವರ್ಧಕಗಳನ್ನು ಅಳವಡಿಸಿ ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮಗಳು ಸಾರ್ವಜನಿಕರಿಗೆ ತಿಳಿಯುವಂತೆ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿ ಮನೆಯ ಮುಂದೆಯೂ ಮಹಿಳೆಯರು ಮಕ್ಕಳು ಬಣ್ಣಬಣ್ಣದ ರಂಗೋಲಿಗಳನ್ನು ಬಿಡಿಸಿದ್ದರು. ಬೇರೆ ಊರುಗಳಿಂದ ನೆಂಟರನ್ನು ಆಹ್ವಾನಿಸಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಆಟೋ ಚಾಲಕರು ರಥ ಸಾಗುವ ರಸ್ತೆಗೆ ನೀರು ಹಾಕಿ ಧೂಳು ಬಾರದಂತೆ ಮುನ್ನೆಚ್ಚರಿಕೆ ಕೈಗೊಂಡರು. ರಥೋತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉದ್ಯಮಿಗಳು ಕುಡಿಯುವ ನೀರು, ಮಜ್ಜಿಗೆ, ಪಾನಕ, ಮೊಸರನ್ನ, ಬಾತ್, ಪುಳಿಯೋಗರೆ ಮುಂತಾದ ಉಪಾಹಾರ ವ್ಯವಸ್ಥೆ ಮಾಡಿ ಭಕ್ತರ ಹಸಿವು ನೀಗಿಸಿದರು.

ಮಧ್ಯಾಹ್ನ 12 ಗಂಟೆಯಲ್ಲಿ ಮುಜರಾಯಿ ಅಧಿಕಾರಿಯೂ ಆದ ತಹಸೀಲ್ದಾರ್ ಸಿ.ಜೆ.ರವಿಶಂಕರ್ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ 75 ಅಡಿ ಎತ್ತರದ ದಿವ್ಯ ರಥೋತ್ಸವಕ್ಕೆ ಚಾಲನೆ ನೀಡಿದರು.

ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ರಥವನ್ನು ಎಳೆಯುವುದು ಇಲ್ಲಿನ ವಿಶೇಷವಾಗಿದೆ. ಜಾನಪದ ಕಲಾತಂಡಗಳು, ಗಾರುಡಿಗೊಂಬೆ, ದೊಣ್ಣೆವರಸೆ, ಗೊರವರ ಕುಣಿತಗಳೊಂದಿಗೆ ಪಂಡಿತ್ ರಾಮಚಂದ್ರ ಅವರ ತಂಡದಿಂದ ನಾದಸ್ವರ ವಾದನ, ಕೇರಳದ ಚಂಡೆಮದ್ದಳೆ, ಬ್ಯಾಂಡ್ ತಂಡ ಗಮನ ಸೆಳೆಯಿತು. ದೇವಸ್ಥಾನದಿಂದ ಹೊರಟ ರಥವು ಮುಖ್ಯ ರಸ್ತೆಯಲ್ಲಿ ಸಾಗಿತು.

ಜಿಲ್ಲಾ ಸಂಪರ್ಕ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದ ಎಲ್ಲ ವಾಹನಗಳನ್ನೂ ಪೊಲೀಸರು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಮಾಡಿದ್ದರಿಂದ ಯಾವುದೇ ಅಡ್ಡಿಯಿಲ್ಲದೆ ರಥೋತ್ಸವ ಜರುಗಿತು. ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿದ ನಂತರ ಬಂದ ಮಾರ್ಗದಲ್ಲಿಯೇ ದೇವಸ್ಥಾನಕ್ಕೆ ಹಿಂದಿರುಗಿತು. ಅಂಗಡಿಯವರು ಹಾಗೂ ಗ್ರಾಮದ ನಿವಾಸಿಗಳು ರಥಕ್ಕೆ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಮೆರೆದರು. ನವ ದಂಪತಿ ಹಣ್ಣು-ದವನ ಎಸೆದು ಕೃತಾರ್ಥರಾದರು.

ಜನಪ್ರತಿನಿಧಿಗಳು, ನ್ಯಾಯಾಧೀಶರ ಭೇಟಿ: ರಥೋತ್ಸವಕ್ಕೆ ಶಾಸಕ ಸಿ.ಎಸ್.ನಿರಂಜಕುಮಾರ್, ಪಟ್ಟಣದ ಹಿರಿಯ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಸವರಾಜ ತಳವಾರ್ ಹಾಗೂ ಶಿವಕುಮಾರ್ ಭೇಟಿ ನೀಡಿದ್ದರು. ತಾಲೂಕಿನ ವಿವಿಧ ಗ್ರಾಮಗಳಲ್ಲದೆ ನೆರೆಯ ತಮಿಳುನಾಡಿನಿಂದಲೂ ಹೆಚ್ಚಿನ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net