ವಿಜೃಂಭಣೆಯ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮರಥೋತ್ಸವ

Published on

ಕೊಳ್ಳೇಗಾಲ : ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಪಟ್ಟಣದ ಕಾವೇರಿ ರಸ್ತೆಯಲ್ಲಿ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ ಆವರಣದಲ್ಲಿ ವಿವಿಧ ಹೂಗಳು ಸಿಂಗಾರಗೊಂಡಿದ್ದ ರಥದ ಮೇಲೆ ಲಕ್ಷ್ಮೀ ನಾರಾಯಣಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಸುಮಾರು 11.50 ವೇಳೆಗೆ ರಥೋ ತ್ಸವಕ್ಕೆ ಉಪವಿಭಾಗಧಿಕಾರಿ ಬಿ.ಆರ್. ಮಹೇಶ್ ಚಾಲನೆ ನೀಡಿದರು. ಶಂಖು, ಜಾಗಟೆ ಸದ್ದು ಮೊಳಗಿದವು. ಬಳಿಕ, ಸಾವಿರಾರು ಜನರು ಶ್ರದ್ಧಾ-ಭಕ್ತಿಯಿಂದ ರಥದ ಬೀದಿಯಲ್ಲಿ ರಥವನ್ನು ಎಳೆದು ಭಕ್ತಿ ಮೆರೆದರು. ಹರಕೆ ಹೊತ್ತವರು ಹಣ್ಣು-ದವನ ಎಸೆದು ಭಕ್ತಿ ಮೆರೆದರು.

ರಥವನ್ನು ಎಳೆಯುವಾಗ ಭಕ್ತರು ಹರ್ಷೋದ್ಗಾರ ಮೊಳಗಿಸಿದರು. ಬಿಸಿಲನ್ನು ಲೆಕ್ಕಿಸದ ಯುವಕರ ಗುಂಪು ಪರಸ್ಪರ ಜಯಘೋಷ ಕೂಗುವ ಮೂಲಕ ಹುರಿದುಂಬಿಸಿಕೊಂಡು ರಥವನ್ನು ಎಳೆಯುತ್ತಿದ್ದು ಎಲ್ಲರ ಗಮನ ಸೆಳೆಯಿತು. ಸಂಜೆ 4.30 ಗಂಟೆ ಸಂದರ್ಭಕ್ಕೆ ರಥವು ದೇವಾಲಯ ಆವರಣ ಸೇರಿತು. ರಥೋತ್ಸವದ ಎಲ್ಲ ಪೂಜಾ ಕೈಂಕರ್ಯವನ್ನು ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಶೇಷಾದ್ರಿ ಭಟ್, ಸುದರ್ಶನ ಭಟ್ ನೇರವೇರಿಸಿದರು.

ದೇವರ ದರ್ಶನ: ರಥೋತ್ಸವ ಹಳಿಕ ತಾಲೂಕಿನ ವಿವಿಧ ಗ್ರಾಮಗಳು ಹಾಗೂ ಪಟ್ಟಣದ ವಿವಿಧ ಬಡಾವಣೆಯ ಭಕ್ತರು ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ರಥೋತ್ಸವ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ಡಿವೈಎಸ್ಪಿ ಧರ್ಮೇಂದ್ರ, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಜಿ.ನಂಜುಂ ಡಸ್ವಾಮಿ, ಚಾಮುಲ್ ಅಧ್ಯಕ್ಷ ಮಧುವನಹಳ್ಳಿ ನಂಜುಂಡಸ್ವಾಮಿ, ನಗರಸಭೆ ಅಧ್ಯಕ್ಷೆ ರೇಖಾ, ಸದಸ್ಯರು, ಸಂಸದ ಜಗದೀಶ್ ಶೆಟ್ಟರ ಆಪ್ತ ಕಾರ್ಯದರ್ಶಿ ಗಿರೀಶ್‌ಬಾಬು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net