ವಿಜೃಂಭಣೆಯ ಶ್ರೀ ಮಹಿಷಾಸುರ ಮರ್ದಿನಿ ಜಾತ್ರೋತ್ಸವ

22 HANUR 2 A
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ಪಟ್ಟಣದ ಶ್ರೀ ಮಹಿಷಾಸುರ ಮರ್ದಿನಿ (ಮೈಸೂರು ಮಾರಮ್ಮ) ಜಾತ್ರೋತ್ಸವದ ಮೊದಲ ದಿನದ ಅಂಗವಾಗಿ ಸೋಮವಾರ ರಾತ್ರಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಜಾಗರವನ್ನು ಸಮರ್ಪಿಸುವುದರ ಮೂಲಕ ದೇವಿ ಕೃಪೆಗೆ ಪಾತ್ರರಾದರು.

ಜಾತ್ರೋತ್ಸವದ ಅಂಗವಾಗಿ ದೇವಿಯ ವಿಗ್ರಹ ಮೂರ್ತಿಯನ್ನು ವಿವಿಧ ಪುಷ್ಪದಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ದೇಗುಲ ಸೇರಿದಂತೆ ಆವರಣವನ್ನು ವಿವಿಧ ಪುಷ್ಪ, ತಳೀರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಪಟ್ಟಣದ ಬಸ್ ನಿಲ್ದಾಣದ ಬಳಿ ವಿವಿಧ ವಿದ್ಯುತ್ ದೀಪದಿಂದ ಕಂಗೊಳಿಸುವ ಬೃಹತ್ ಮಾರಮ್ಮನ ಚಿತ್ರವನ್ನು ಅಳವಡಿಸಲಾಗಿತ್ತು. ಸೋಮವಾರ ಬೆಳಗ್ಗೆ ದೇವಿಗೆ ಹಾಲು, ಮೊಸರು, ಜೇನುತುಪ್ಪ, ಎಳನೀರು, ಗಂಧ, ಅರಿಶಿಣ ಹಾಗೂ ಕುಂಕುಮ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಾಮಂಗಳಾರತಿ ಬೆಳಗಿದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಜಾಗರ ಸಮರ್ಪಣೆ: ಸೋಮವಾರ ರಾತ್ರಿ ದೇಗುಲಕ್ಕೆ ಜಾಗರ ಅರ್ಪಣೆ ನಿಮಿತ್ತ ಕಳೆದ ಒಂದು ವಾರದಿಂದಲೇ ಮನೆಗಳಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಶ್ರದ್ಧಾಭಕ್ತಿಯಿಂದ ನೀರುಣಿಸಿ ಬೆಳೆಸಿದ ಧಾನ್ಯಗಳ ಪೈರುಗಳಿಗೆ (ಜಾಗರ) ಭಕ್ತರು ವಿಶೇಷ ಪೂಜೆಯನ್ನು ಸಲ್ಲಿಸಿದರು. ರಾತ್ರಿ 10.30ರಲ್ಲಿ ಪಟ್ಟಣದ ವಿವಿಧ ಬಡಾವಣೆಗಳಿಂದ ಜಾಗರವನ್ನು ಹೊತ್ತ ಹೆಣ್ಣು ಮಕ್ಕಳು, ಮಹಿಳೆಯರು ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇಗುಲಕ್ಕೆ ಆಗಮಿಸಿ ಭಕ್ತಿ ಭಾವದಿಂದ ಜಾಗರವನ್ನು ದೇವಿಗೆ ಸಮರ್ಪಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇಗುಲದ ಮುಂಭಾಗ ನೆರೆದಿದ್ದರು. ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ತಂಪು ಜ್ಯೋತಿ ಅರ್ಪಣೆ: ಮಂಗಳವಾರ ತಂಪುಜ್ಯೋತಿ (ತಂಬಿಟ್ಟು) ಸೇವೆಯು ವಿಜೃಂಭಣೆಯಿಂದ ನಡೆಯಿತು. ಭಕ್ತರು ತಂಪುಜ್ಯೋತಿಯನ್ನು ದೇಗುಲಕ್ಕೆ ತಂದು ವಿಶೇಷ ಪೂಜೆಯನ್ನು ಸಲ್ಲಿಸಿ ದೇವಿಗೆ ಸಮರ್ಪಿಸಿದರು. ಬೆಳಗ್ಗೆಯಿಂದಲೇ ಆರಂಭವಾದ ತಂಪುಜ್ಯೋತಿ ಕಾರ್ಯಕ್ರಮ ಸಂಜೆಯವರೆಗೂ ನಡೆಯಿತು. ಆಗಮಿಸಿದ ಭಕ್ತರು ದೇಗುಲದ ಮುಂಭಾಗ ಧೂಪ ಹಾಕಿ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಈಡುಗಾಯಿ ಒಡೆದು ದೇವಿ ಕೃಪೆಗೆ ಪಾತ್ರರಾದರು. ಕೆಲ ಭಕ್ತರು ದೇವಿಗೆ ಹರಕೆ ಕಾಣಿಕೆಯನ್ನು ಸಲ್ಲಿಸಿದರು.

ಪಟ್ಟಣ ಸೇರಿದಂತೆ ರಾಮಾಪುರ, ಕೌದಳ್ಳಿ, ಲೊಕ್ಕನಹಳ್ಳಿ, ಕೊಳ್ಳೇಗಾಲ ಹಾಗೂ ಇನ್ನಿತರ ಕಡೆಗಳಿಂದ ಭಕ್ತರು ಆಗಮಿಸಿದ್ದರು. ದೇಗುಲದ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು. ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net