

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದಲ್ಲಿ ರಾಜಋಷಿ ಶ್ರೀ ಮಹರ್ಷಿ ಭಗೀರಥ ಜಯಂತಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಮದ್ದೇವಲ ಮಹರ್ಷಿ ವೃತ್ತದಲ್ಲಿ ಶ್ರೀ ಮಹರ್ಷಿ ಭಗೀರಥ ಭಾವಚಿತ್ರವುಳ್ಳ ಬೆಳ್ಳಿ ರಥಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು.
ಬಳಿಕ ಡಾ.ವಿಷ್ಣುವರ್ಧನ್ ರಸ್ತೆ, ಡಾ.ರಾಜ್‌ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಎಡಿಬಿ ವೃತ್ತದ ಮೂಲಕ ಮೆರವಣಿಗೆ ಸಾಗಿತು. ವಿವಿಧ ಹೂಗಳಿಂದ ಅಲಂಕೃತಗೊಂಡಿದ್ದ ಸತ್ತಿಗೆಗಳು, ಕಲಾತಂಡಗಳು ಮೆರವಣಿಗೆ ಮೆರಗು ನೀಡಿತು. ಮಂಗಳವಾದ್ಯ, ಡೊಳ್ಳು, ತಮಟೆ ಸೇರಿದಂತೆ ಡಿಜೆ ಸೌಂಡ್ಸ್‌ಗೆ ಯುವಕರು ಕುಣಿದು ಕುಪ್ಪಳಿಸಿದರು.
ವಿವಿಧ ಗ್ರಾಮದ ಜನರು ದೊಣ್ಣೆ ವರಸೆ ಕಲೆಯ ಪ್ರದರ್ಶನ ನೀಡಿದರು. ಸುಮಾರು 2 ಸಾವಿರ ಜನರು ಮೆರವಣಿಯಲ್ಲಿ ಪಾಲ್ಗೊಂಡಿದ್ದರು. ಪಟಾಕಿ ಸಿಡಿಸಿ ಯುವಕರು ಸಂಭ್ರಮಿಸಿದರು. ಮೆರವ ಣಿಗೆಯಲ್ಲಿ ಹನೂರು ಶಾಸಕ ಎಂ.ಆರ್. ಮಂಜುನಾಥ್, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರಾದ ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು ಪಾಲ್ಗೊಂಡು ಶ್ರೀ ಭಗೀರಥ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೊನೆಗೆ ಮೆರವಣಿಗೆ ಸರ್ಕಾರಿ ನ್ಯಾಷನಲ್ ಶಾಲಾ ಮೈದಾನ ತಲುಪಿತು.
ನಂತರ, ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು, ಶ್ರೀ ಭಗೀರಥರು ಕಠಿಣ ತಪಸ್ಸನ್ನು ಮಾಡುವ ಮೂಲಕ ಸಾಕ್ಷತ್ ಶಿವನನ್ನು ಒಲಿಸಿಕೊಂಡು ಗಂಗೆಯನ್ನೆ ಧರೆಗಿಳಿಸಿ ಸಕಲ ಜೀವರಾಶಿಯನ್ನು ಉಳಿಸಿದರು. ಅವರ ಛಲವು ಎಲ್ಲರಿಗೂ ಸ್ಪೂರ್ತಿದಾಯಕ ಎಂದರು.
ಹಳ್ಳಿಗಳಲ್ಲಿ ಎಲ್ಲ ಸಮುದಾಯದಗಳಲ್ಲೂ ಬಾಲ್ಯ ವಿವಾಹ ಇನ್ನು ಜೀವಂತವಾಗಿದೆ. ಇದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಉನ್ನತ ಶಿಕ್ಷಣ ನೀಡಿ ಅವರಿಗೆ ಉಜ್ವಲ ಭವಿಷ್ಯವನ್ನು ರೂಪಿಸಬೇಕು. ಸರ್ಕಾರ ಎಲ್ಲ ಸಮುದಾಯದ ಜನರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಅದನ್ನು ಸದುಪಯಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಯಡಮೋಳೆ ಶಾಲೆಯ ಶಿಕ್ಷಕ ಗೋವಿಂದರಾಜು ಶ್ರೀ ಭಗೀರಥರ ಕುರಿತು ವಿಸ್ತೃತವಾಗಿ ಮಾತನಾಡಿದರು.ಈ ವೇಳೆ ಕಲಾವಿದರಿಗೆ ಹಾಗೂ ಸಮುದಾಯದ ಯಜಮಾನರನ್ನು ಗೌರವಿಸಲಾಯಿತು.
ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ರಾಜೇಂದ್ರ ಕುಂತೂರು ಮೋಳೆ, ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಜಿ.ಪಂ. ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ ಉಪ್ಪಾರ ಸಂಘ ತಾಲೂಕು ಅಧ್ಯಕ್ಷ ರಮೇಶ್, ಉಪವಿಭಾಗಧಿಕಾರಿ ಬಿ.ಆರ್. ಮಹೇಶ್, ತಹಸೀಲ್ದಾರ್ ಬಸವರಾಜು, ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ನಗರಸಭೆ ಪೌರಾಯುಕ್ತ ಪರಶಿವಯ್ಯ, ಚೆಸ್ಕಾಂ ಎಇಇ ರಾಜು ಇತರರಿದ್ದರು.