

ಹೊಳೆನರಸೀಪುರ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಗುರುವಾರ ಶ್ರೀ ನೀಲಕಂಠೇಶ್ವರ ಸ್ವಾಮಿ ರಥೋತ್ಸವ ವೈಭವದಿಂದ ನಡೆಯಿತು.
ಪಟ್ಟಣದ ರಥ ಬೀದಿಯಲ್ಲಿರುವ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ಪತಿ ಶಾಖಾ ಮಠದ ಆವರಣದಲ್ಲಿರುವ ನೀಲಕಂಠೇಶ್ವರ ದೇವಾಲಯದಲ್ಲಿ ಮುಂಜಾನೆಯೇ ಗಣೇಶ ಪೂಜೆ, ಪುಣ್ಯಾಹವಾಚನ, ಧ್ವಜಾರೋಹಣ.. ಇತ್ಯಾದಿ ಪೂಜಾ ಕಾರ್ಯಗಳು ನೆರವೇರಿತು.
ಕೆ.ಆರ್.ನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ಪತೀ ಮಠದ ಶ್ರೀ ಶಂಕರ ಭಾರತೀ ಶ್ರೀಗಳ ಮಾರ್ಗದರ್ಶನದಲ್ಲಿ ಬ್ರಹ್ಮಾನಂದ ಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ಹೋಮ, ಕಲಶ ಸ್ಥಾಪನಾದಿಗಳು, ಬಲಿ ಉತ್ಸವ, ಗಿರಿಜಾ ಕಲ್ಯಾಣೋತ್ಸವ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸಹಿತ ವಿಶೇಷ ಪೂಜೆಗಳು ನಡೆಯಿತು. ಬಳಿಕ ರಥಾಧಿವಾಸ, ಕಲಶಸ್ಥಾಪನೆ, ರಥಶುದ್ಧಿ, ರಥಾರೋಹಣ ಹಾಗೂ ರಥೋತ್ಸವ ನಡೆಯಿತು.
ರಥೋತ್ಸವ ಸಂದರ್ಭದಲ್ಲಿ ಎಸ್‌ಎಲ್‌ಎನ್ ವಿದ್ಯಾಸಂಸ್ಥೆ ವಿಧ್ಯಾರ್ಥಿಗಳು ವಾಧ್ಯಘೋಷ, ಕೋಲಾಟ ಹಾಗೂ ಭಜನೆ ಮಾಡಿದರು. ಹರಿದಾಸ ಮಹಿಳಾ ಸಂಘ, ಸೌಂದರ್ಯ ಲಹರಿ ಭಜನಾ ಮಂಡಳಿ ಸದಸ್ಯರು ಹಾಗೂ ಸುಮಂಗಲಿಯರು ಸೌಂದರ್ಯ ಲಹರಿ, ಶಿವಾನಂದಲಹರಿ, ಲಲಿತ ಸಹಸ್ರನಾಮ ಮುಂತಾದ ಸ್ತೋತ್ರಗಳನ್ನು ಪಾರಾಯಣ ಮಾಡಿದರು. ರಥೋತ್ಸವ ನಂತರ ದೇವಾಲಯದಲ್ಲಿ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.