ವಿಜೃಂಭಣೆಯ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ

16
Published on

ಮೈಸೂರು: ಶ್ರೀ ಚಾಮುಂಡೇಶ್ವರಿಯ ದೇವಿಯ ವರ್ಧಂತಿ ಮಹೋತ್ಸವದ ಸಡಗರ ಚಾಮುಂಡಿಬೆಟ್ಟದಲ್ಲಿ ಕಳೆಗಟ್ಟಿತ್ತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಸಮೂಹ ಸಡಗರವನ್ನು ಕಣ್ತುಂಬಿಕೊಂಡಿತು.

ಆಷಾಢ ಮಾಸದ ಕೃಷ್ಣಪಕ್ಷದ ಅಷ್ಟಮಿಯ ರೇವತಿ ನಕ್ಷತ್ರದ ದಿನವಾದ ಸೋಮವಾರ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ (ಜನ್ಮದಿನ)ವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಾಂಪ್ರದಾಯಿಕ ಪೂಜಾ ಕಾರ್ಯದೊಂದಿಗೆ ಶಕ್ತಿದೇವತೆಗೆ ಶ್ರದ್ಧಾಭಕ್ತಿಯಿಂದ ನಮಿಸಲಾಯಿತು. ಮಹಾಲಕ್ಷ್ಮೀ ಅಲಂಕಾರದಲ್ಲಿ ದೇವಿ ಕಣ್ಮನ ಸೆಳೆದರೆ, ವಿವಿಧ ಹೂವುಗಳಿಂದ ಅಲಂಕಾರಗೊಂಡಿದ್ದ ಚಾಮುಂಡೇಶ್ವರಿ ದೇಗುಲ ಭಕ್ತರನ್ನು ಆಕರ್ಷಿಸಿತು.

ವರ್ಧಂತಿ ಅಂಗವಾಗಿ ದೇವಿಯ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಧಾನ ಅರ್ಚಕ ಡಾ.ಎನ್.ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಬೆಳಗ್ಗೆ 5.30ರಿಂದ ತಾಯಿಗೆ ಪೂಜಾ ಕೈಕಂರ್ಯಗಳನ್ನು ನೆರವೇರಿಸಲಾಯಿತು. ಉತ್ಸವ ಮೂರ್ತಿಗೆ ಅಭ್ಯಂಜನ(ಎಣ್ಣೆಸ್ನಾನ), ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ತ್ರಿಪದಿ, ಅಷ್ಟೋತ್ತರ ಪೂಜೆ ಸಲ್ಲಿಸಲಾಯಿತು.

ಬೆಳಗ್ಗೆ 10.30ಕ್ಕೆ ಚಿನ್ನದ ಅಡ್ಡ ಪಲ್ಲಕ್ಕಿಯಲ್ಲಿ ಚಾಮುಂಡೇಶ್ವರಿಯ ಉತ್ಸವಮೂರ್ತಿಯನ್ನು ದೇವಾಲಯದ ಸುತ್ತ ಮೆರವಣಿಗೆ ಮಾಡಲಾಯಿತು. ಸಂಪ್ರದಾಯದಂತೆ ಚಿನ್ನದ ಅಡ್ಡಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾಕುಮಾರಿ ಒಡೆಯರ್ ಅವರು ಪಲ್ಲಕ್ಕಿಯನ್ನು ಎಳೆಯುವ ಮೂಲಕ ಚಾಲನೆ ನೀಡಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಎಚ್.ಎಂ.ರೇವಣ್ಣ ಇನ್ನಿತರರು ಸಾಥ್ ನೀಡಿದರು.

ಮಂಗಳವಾದ್ಯ, ಪೊಲೀಸ್ ಬ್ಯಾಂಡ್ ಸಂಗೀತ, ಬಿರುದು, ಬಾವಲಿ, ಛತ್ರಿ, ಚಾಮರದೊಂದಿಗೆ ದೇವಾಲಯದ ಸುತ್ತಲೂ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಿತು. ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಸಾವಿರಾರು ಜನರು ದೇವಿಗೆ ಜೈಕಾರ ಹಾಕುತ್ತ ಕೈ ಮುಗಿದು ನಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net