ವಿಜೃಂಭಣೆಯ ಲಕ್ಷ್ಮಿಕಾಂತಸ್ವಾಮಿ ರಥೋತ್ಸವ

08NGD2
Published on

ನಂಜನಗೂಡು: ವೇಣುಪುರಿ ಎಂದೇ ಪುರಾಣ ಪ್ರಸಿದ್ಧಿ ಹೊಂದಿರುವ ತಾಲೂಕಿನ ಕಳಲೆ ಗ್ರಾಮದಲ್ಲಿ ಶ್ರೀ ಲಕ್ಷ್ಮಿಕಾಂತಸ್ವಾಮಿ ರಥೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಮುಂಜಾನೆ 6:19ರಿಂದ 6:40ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬಗೆಬಗೆಯ ಪುಷ್ಪಾಲಂಕಾರದಿಂದ ಸಿಂಗರಿಸಲಾಗಿದ್ದ ಅರವಿಂದನಾಯಕಿ ಅಮ್ಮ ಹಾಗೂ ಆಂಡಾಳಮ್ಮ ಜತೆಗೆ ಲಕ್ಷ್ಮಿಕಾಂತಸ್ವಾಮಿ ಉತ್ಸವಮೂರ್ತಿಗೆ ಪಾರುಪತ್ತೇದಾರ್ ಜಯರಾಂ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಸಾಂಗವಾಗಿ ಜರುಗಿದವು.

ನಂತರ ಮಂಗಳ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಉತ್ಸವಮೂರ್ತಿಯನ್ನು ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥದ ಚಕ್ರಗಳಿಗೆ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ದೇವಾಲಯದ ಅರ್ಚಕರು ಮಂತ್ರ ಘೋಷಗಳೊಂದಿಗೆ ರಥದ ಹಿಂದೆ ಸಾಗಿದರೆ, ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹ ರಥವನ್ನು ಎಳೆದರು. ರಥ ಅಗ್ರಹಾರ ಬೀದಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರಿ ಪ್ರೌಢಶಾಲೆ ಮುಂಭಾಗ ನಿಂತಿತು. ಸಂಜೆ ವೇಳೆ ಗ್ರಾಮದ ಹಲವು ಬೀದಿಗಳಲ್ಲಿ ರಥ ಸಂಚರಿಸಿ ದೇವಾಲಯದ ಮುಂಭಾಗದಲ್ಲಿರುವ ಸ್ವಸ್ಥಾನಕ್ಕೆ ಮರಳಿತು.

ರಥೋತ್ಸವದ ವೇಳೆ ನವದಂಪತಿಗಳು ಹಣ್ಣು ಧವನ ಎಸೆದರು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಉತ್ಸವಮೂರ್ತಿಯನ್ನು ಕಣ್ತುಂಬಿಕೊಂಡರು. ದೇವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.

ಸಂಘ ಸಂಸ್ಥೆಗಳು ಹಾಗೂ ದಾನಿಗಳು ಪಾನಕ, ಮಜ್ಜಿಗೆ ವಿತರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net