

ಯಳಂದೂರು: ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಮಂಟೇಸ್ವಾಮಿ ಕೊಂಡೋತ್ಸವ ಸೋಮವಾರ ಬೆಳಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕೊಂಡೋತ್ಸವದ ನಿಮಿತ್ತ ಗ್ರಾಮದ ಮುಂಭಾಗದಲ್ಲಿರುವ ಮಾರಮ್ಮ ದೇಗುಲದ ಬಳಿ ಕೊಂಡದ ಬೆಂಕಿಯನ್ನು ಹಾಕಲಾಗಿತ್ತು. ರಾಷ್ಟ್ರೀಯ ಹೆದ್ದಾರಿ-209ರ ಬಳಿ ಇರುವ ಕೊಳವೆ ಬಾವಿಯಿಂದ ಹೊಸ ನೀರು ತಂದು ಪೂಜೆ ಸಲ್ಲಿಸಿ, ಹೂವು, ತಳಿರು-ತೋರಣಗಳಿಂದ ಅಲಂಕೃತ ಸತ್ತಿಗೆ, ಸೂರಿಪಾನಿಗಳನ್ನು ಹೊತ್ತ ಭಕ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಯಲ್ಲಿ ಸಾಗಿ ಬಂದರು. ದಾರಿಯುದ್ದಕ್ಕೂ ಹರಕೆ ಹೊತ್ತ ಭಕ್ತರು, ಕರ್ಪೂರದ ಆರತಿ ಮಾಡಿ, ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ನಂತರ ಸಾವಿರಾರು ಭಕ್ತರ ನಡುವೆ ಕೊಂಡದ ಬೆಂಕಿಯನ್ನು ಹಲವು ಭಕ್ತರ ಹಷೋದ್ಗಾರಗಳ ನಡುವೆ ಹಾಯಲಾಯಿತು.
ಹೆದ್ದಾರಿ ಬಳಿಯಲ್ಲೇ ಕೊಂಡೋತ್ಸವ ನಡೆದಿದ್ದರಿಂದ ಸುಗಮ ವಾಹನ ಸಂಚಾರಕ್ಕೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಚುನಾಯಿತ ಜನಪ್ರತಿಧಿಗಳು, ವಿವಿಧ ಪಕ್ಷಗಳ ಮುಖಂಡರು, ವಿವಿಧ ಜಿಲ್ಲೆ, ತಾಲೂಕುಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಭಕ್ತಿ ಮೆರೆದರು.